ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste Census: ಜಾತಿ ಗಣತಿಯಿಂದ ಬದಲಾಗುವುದೇ ದೇಶದ ರಾಜಕೀಯ ನಕ್ಷೆ?

ದೇಶಾದ್ಯಂತ ಕೊನೆಯ ಬಾರಿಗೆ 2011 ರಲ್ಲಿ ಜನಗಣತಿ ನಡೆಸಿ ಭಾರತದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ- ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು. ದೇಶದ ಸ್ವಾತಂತ್ರ್ಯದ ಬಳಿಕ ಪ್ರತಿ ಹತ್ತು ವರ್ಷಕ್ಕೊಮ್ಮೆ ಇದನ್ನು ನಡೆಸಲಾಗುತ್ತಿದ್ದರೂ 2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಆತಂಕದ ಕಾರಣದಿಂದ ನಡೆಸಲಾಗಿಲ್ಲ. ಇದೀಗ ಮತ್ತೊಮ್ಮೆ ಜನಗಣತಿ ನಡೆಯುವುದು ಪಕ್ಕಾ ಆಗಿದೆ. ಇದರೊಂದಿಗೆ ಈ ಬಾರಿ ಜಾತಿ ಗಣತಿಯೂ (Socio-Economic and Caste Census) ನಡೆಯಲಿದೆ.

ಜಾತಿ ಗಣತಿಯಿಂದ ಬದಲಾಗುವುದೇ ದೇಶದ ರಾಜಕೀಯ ನಕ್ಷೆ?

ಬೆಂಗಳೂರು: ಮುಂದಿನ ಜನಗಣತಿಯಲ್ಲಿ (Census) ಜಾತಿ ಗಣತಿಯನ್ನು (Caste Census) ಸೇರಿಸುವುದಾಗಿ ಕೇಂದ್ರ ಸರ್ಕಾರ (Central Government) ಘೋಷಿಸಿದ್ದು, ಇದರಿಂದ ದೇಶದ ಜನಗಣತಿಯ ಲೆಕ್ಕಾಚಾರದ ವೇಳೆ ಒಂದು ಹೊಸ ಚಿತ್ರಣ ಬೆಳಕಿಗೆ ಬರಲಿದೆ. ಅಲ್ಲದೇ ಇದರಿಂದ ದೇಶದ ರಾಜಕೀಯ ನಕ್ಷೆಯು ಸಂಪೂರ್ಣ ಬದಲಾವಣೆಯಾಗುವ ಸಾಧ್ಯತೆ ಇದೆ. ಭಾರತ ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಜಾತಿ ಗಣತಿ (Socio-Economic and Caste Census) ನಡೆಯಲಿದೆ. ಹಲವು ವರ್ಷಗಳಿಂದ ಇದು ಚರ್ಚೆಯಲ್ಲಿದ್ದರೂ ಇದೇ ಮೊದಲ ಬಾರಿಗೆ ವಿರೋಧ ಪಕ್ಷಗಳ ಸಾಕಷ್ಟು ಒತ್ತಾಯದ ಬಳಿಕ ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸಲು ದಿಟ್ಟ ಹೆಜ್ಜೆಯನ್ನೇ ಇಟ್ಟಿದೆ. ಹೀಗಾಗಿ ಇದು ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ದೇಶಾದ್ಯಂತ ಕೊನೆಯ ಬಾರಿಗೆ 2011 ರಲ್ಲಿ ಜನಗಣತಿ ನಡೆಸಿ ಭಾರತದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ- ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು. ದೇಶದ ಸ್ವಾತಂತ್ರ್ಯದ ಬಳಿಕ ಪ್ರತಿ ಹತ್ತು ವರ್ಷಕ್ಕೊಮ್ಮೆ ಇದನ್ನು ನಡೆಸಲಾಗುತ್ತಿದ್ದರೂ 2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಆತಂಕದ ಕಾರಣದಿಂದ ನಡೆಸಲಾಗಿಲ್ಲ. ಇದೀಗ ಮತ್ತೊಮ್ಮೆ ಜನಗಣತಿ ನಡೆಯುವುದು ಪಕ್ಕ ಆಗಿದೆ. ಇದರೊಂದಿಗೆ ಈ ಬಾರಿ ಜಾತಿ ಗಣತಿಯೂ ನಡೆಯಲಿದೆ.

ಬ್ರಿಟಿಷರು ನಡೆಸಿದ್ದರು ಜಾತಿ ಗಣತಿ

ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತದಲ್ಲಿ ಜಾತಿ ಗಣತಿ ನಡೆಸಲಾಗಿತ್ತು. 1881 ಮತ್ತು 1931ರ ನಡುವೆ ಜನಗಣತಿ ಸಮಯದಲ್ಲಿ ಎಲ್ಲಾ ಜಾತಿವರ್ಗಗಳನ್ನು ಎಣಿಸಲಾಗಿತ್ತು.

ಸ್ವಾತಂತ್ರ್ಯ ಭಾರತದಲ್ಲಿ ಜನಗಣತಿ

ಸ್ವಾತಂತ್ರ್ಯ ಭಾರತದಲ್ಲಿ 1951ರಲ್ಲಿ ಮೊದಲ ಜನಗಣತಿಯ ವೇಳೆ ಆಗಿನ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳನ್ನು ಹೊರತುಪಡಿಸಿ ಉಳಿದ ಜಾತಿಗಳ ಲೆಕ್ಕಾಚಾರ ಮಾಡದೇ ಇರಲು ನಿರ್ಧರಿಸಿತು. ಸುಮಾರು ಒಂದು ದಶಕದ ಬಳಿಕ ಅಂದರೆ 1961ರಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳು ಜನಗಣತಿ ಸಮೀಕ್ಷೆಗಳನ್ನು ನಡೆಸಿ ಇದರಲ್ಲಿ ಬೇಕಿದ್ದರೆ ಒಬಿಸಿಗಳ ನಿರ್ದಿಷ್ಟ ಪಟ್ಟಿಗಳನ್ನು ಸೇರಿಸುವಂತೆ ಸೂಚಿಸಿತ್ತು.

ಇದಾಗಿ ಸುಮಾರು ಆರು ದಶಕಗಳ ಬಳಿಕ ವಿವಿಧ ಪಕ್ಷಗಳ ಒತ್ತಾಯದ ಮೇರೆಗೆ ಮುಂದಿನ ರಾಷ್ಟ್ರವ್ಯಾಪಿ ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ನಡೆಸಲು ಇದೀಗ ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶಾದ್ಯಂತ ಕೊನೆಯದಾಗಿ 2011ರಲ್ಲಿ ಸಾಮಾಜಿಕ- ಆರ್ಥಿಕ ಲೆಕ್ಕಾಚಾರದಲ್ಲಿ ಜನಗಣತಿ ನಡೆದಿದೆ. ಇದರಲ್ಲಿ ವ್ಯಕ್ತಿಗಳ ಸಾಮಾಜಿಕ- ಆರ್ಥಿಕ ಸ್ಥಿತಿಯ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಜಾತಿ ಜನಗಣತಿ ಎಂದರೇನು?

ಜನಗಣತಿ ಸಮಯದಲ್ಲಿ ವ್ಯಕ್ತಿಗಳ ಜಾತಿ ಗುರುತುಗಳ ಕುರಿತು ಮಾಹಿತಿ ಮತ್ತು ದತ್ತಾಂಶ ಸಂಗ್ರಹವೇ ಜಾತಿ ಗಣತಿ ಯಾಗಿದೆ. ಜಾತಿಯು ದೇಶದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯದ ಮೇಲೆ ಗಮನಾರ್ಹವಾಗಿ ಪರಿಣಾಮವನ್ನು ಬೀರುತ್ತಿದೆ. ಈ ಅಂಕಿಅಂಶವು ಜನಸಂಖ್ಯೆ ಎಷ್ಟಿದೆ ಎಂಬುದನ್ನು ಸೂಚಿಸುವುದು ಮಾತ್ರವಲ್ಲದೆ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಮತ್ತು ವಿವಿಧ ಜಾತಿ ಗುಂಪುಗಳ ಪ್ರಾತಿನಿಧ್ಯದ ಬಗ್ಗೆಯು ವಿವರಣೆಯನ್ನು ಒದಗಿಸುತ್ತದೆ. ಇದು ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಕುರಿತು ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Amul Milk Price Hike: ನಂದಿನಿಯ ಹಿಂದೆಯೇ ಅಮುಲ್‌ ಹಾಲಿನ ದರ ಕೂಡ ಏರಿಕೆ; ಲೀಟರ್‌ಗೆ 2 ರೂ ಹೆಚ್ಚಳ

censes1

ಇತಿಹಾಸದಲ್ಲಿ ಏನಿದೆ?

ಭಾರತದಲ್ಲಿ ಜಾತಿ ಗಣತಿಗೆ ಸುದೀರ್ಘವಾದ ಇತಿಹಾಸವೇ ಇದೆ. ಬ್ರಿಟಿಷ್ ಆಡಳಿತದ ಕಾಲದಲ್ಲಿ ಅಂದರೆ 1881 ಮತ್ತು 1931ರ ನಡುವೆ ಪ್ರತಿ ದಶಕದಲ್ಲೂ ನಡೆಸಿದ ಜನಗಣತಿಯಲ್ಲಿ ಜಾತಿ ಗಣತಿಯನ್ನು ಮಾಡಲಾಗಿದೆ. ಇದರಲ್ಲಿ ಜಾತಿ, ಧರ್ಮ ಮತ್ತು ಉದ್ಯೋಗದ ಮೂಲಕ ಜನಸಂಖ್ಯೆಯನ್ನು ವರ್ಗೀಕರಿಸಲಾಗಿತ್ತು.

1947ರಲ್ಲಿ ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ 1951ರಲ್ಲಿ ನಡೆದ ಜನಗಣತಿಯ ವೇಳೆ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ನೇತೃತ್ವದ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಉಳಿದ ಜಾತಿ ಎಣಿಕೆಯನ್ನು ನಿಲ್ಲಿಸಲು ಆದೇಶಿಸಿದರು. ಯಾಕೆಂದರೆ ಜಾತಿ ಗಣತಿಯು ವಿಭಜನೆಗೆ ಅವಕಾಶ ಮಾಡಿಕೊಡುತ್ತದೆ ಮತ್ತು ರಾಷ್ಟ್ರೀಯ ಏಕತೆಗೆ ಅಡ್ಡಿಯಾಗುತ್ತದೆ ಎನ್ನುವ ಕಾರಣದಿಂದ. ಬಳಿಕ 1961ರಲ್ಲಿ ಕೇಂದ್ರ ಸರ್ಕಾರವು ಇತರ ಹಿಂದುಳಿದ ವರ್ಗಗಳ (ಒಬಿಸಿ) ನಿರ್ದಿಷ್ಟ ಪಟ್ಟಿಗಳನ್ನು ತಯಾರಿಸಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿತ್ತು. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಗುಂಪುಗಳ ಒತ್ತಾಯವಾಗಿತ್ತು. ಆದರೂ ಇದನ್ನು ರಾಷ್ಟ್ರವ್ಯಾಪಿ ನಡೆಸಲಿಲ್ಲ.

ಜಾತಿ ಜನಗಣತಿ ಮತ್ತು ರಾಜಕೀಯ

1980ರಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಒಬಿಸಿಗಳಿಗೆ ಶೇಕಡಾ 27ರಷ್ಟು ಮೀಸಲಾತಿಯನ್ನು ಒದಗಿಸಬೇಕೆಂಬ ಮಂಡಲ್ ಆಯೋಗದ ಶಿಫಾರಸ್ಸಿನ ಬಳಿಕ ಜಾತಿಯ ಲೆಕ್ಕಾಚಾರ ರಾಜಕೀಯದಲ್ಲಿ ಪ್ರಭಾವ ಬೀರಲು ಪ್ರಾರಂಭಿಸಿತ್ತು. ಹೀಗಾಗಿ ಜಾತಿ ಜನಗಣತಿಯ ಬೇಡಿಕೆಗಳು ಹೆಚ್ಚಾಯಿತು.

2011ರಲ್ಲಿ ಯುಪಿಎ ಸರ್ಕಾರವು ದೇಶದಲ್ಲಿ ಕೊನೆಯದಾಗಿ ಸಾಮಾಜಿಕ, ಆರ್ಥಿಕ ಲೆಕ್ಕಾಚಾರದಲ್ಲಿ ಜಾತಿ ಜನಗಣತಿಯನ್ನು ನಡೆಸಿದೆ. ಇದು 1931ರ ಬಳಿಕ ದೇಶಾದ್ಯಂತ ನಡೆದ ಮೊದಲ ಜಾತಿ ಗಣತಿಯಾಗಿದೆ. ಆದರೆ ಇದನ್ನು ಸಂಪೂರ್ಣವಾಗಿ ಸರ್ಕಾರ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ವಿರೋಧ ಪಕ್ಷಗಳು ಮತ್ತು ಜಾತಿ ಆಧಾರಿತ ಸಂಘಟನೆಗಳಿಂದ ಸರ್ಕಾರ ಟೀಕೆಯನ್ನು ಎದುರಿಸಬೇಕಾಯಿತು.

ರಾಷ್ಟ್ರೀಯ ಜಾತಿ ಜನಗಣತಿಯ ನಡೆಯದೇ ಇದ್ದರೂ ಬಿಹಾರ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳು ತಮ್ಮದೇ ಆದ ರೀತಿಯಲ್ಲಿ ಜಾತಿ ಸಮೀಕ್ಷೆಗಳನ್ನು ನಡೆಸಿವೆ. ಈ ಮೂಲಕ ಮೀಸಲಾತಿ ನೀತಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಬಳಸುವ ಗುರಿಯನ್ನು ಹೊಂದಿವೆ.

ಜಾತಿ ಗಣತಿ ಯಾಕೆ ಮುಖ್ಯ?

ಜಾತಿ ಜನಗಣತಿಯು ಸಾಮಾಜಿಕವಾಗಿ ಮಾತ್ರವಲ್ಲ ರಾಜಕೀಯವಾಗಿಯೂ ಅಳವಾಗಿ ಪ್ರಭಾವ ಬೀರುವ ಸಂಗತಿಯಾಗಿದೆ. ಇದು ಮೀಸಲಾತಿ ನೀತಿಗಳು, ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಮೇಲೆ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ರಾಜಕೀಯ ಪಕ್ಷಗಳು ಜಾತಿ ಸಂಘಟನೆಗಳಿಂದ ಬೆಂಬಲಿತವಾಗಿರುವುದರಿಂದ ಇದು ಚುನಾವಣಾ ತಂತ್ರಗಳನ್ನು ಮರುರೂಪಿಸುವಂತೆ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹಾಕುವ ಸಾಧ್ಯತೆಯೂ ಇದೆ.

ನಿಖರವಾದ ಜಾತಿ ಅಂಕಿ ಅಂಶಗಳು ಸಾಮಾಜಿಕ- ಆರ್ಥಿಕ ಅಸಮಾನತೆಗಳನ್ನು ಪರಿಹರಿಸಲು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ನೀಡಲು ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ.ಅಲ್ಲದೇ ಅಳಿವಿನಂಚಿನಲ್ಲಿರುವ ಸಮುದಾಯಗಳನ್ನು ಗುರುತಿಸಲು ಮತ್ತು ಮೇಲಕ್ಕೆತ್ತಲು ಜಾತಿ ಜನಗಣತಿ ಅತ್ಯಗತ್ಯವಾಗಿದೆ.

ಯಾವಾಗ ನಡೆಯಬಹುದು?

ಸುಮಾರು 70 ವರ್ಷಗಳಿಂದ ನಿಂತೇ ಹೋಗಿದ್ದ ಜಾತಿ ಗಣತಿಯನ್ನು ಸರ್ಕಾರ ನಡೆಸಲು ಈಗ ಮುಂದಾಗಿದೆ. ಇದು ಮುಂದಿನ ಜನಗಣತಿ ವೇಳೆ ನಡೆಯಲಿದೆ. ಆದರೆ ಇದನ್ನು ಹೇಗೆ ಸಂಗ್ರಹಿಸಲಾಗುತ್ತದೆ, ವರ್ಗೀಕರಿಸಲಾಗುತ್ತದೆ ಮತ್ತು ಬಳಸಲಾಗುತ್ತದೆ ಎಂಬುದನ್ನು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೇ ಮುಂದಿನ ಜನಗಣತಿ ಯಾವಾಗ ನಡೆಸಬೇಕೆಂಬುದನ್ನೂ ಇನ್ನೂ ನಿರ್ಧರಿಸಲಾಗಿಲ್ಲ.