ಇನ್ನಷ್ಟು ಮತದಾರಸ್ನೇಹಿ ಕ್ರಮಗಳನ್ನು ಪರಿಚಯಿಸಿದ ಚುನಾವಣಾ ಆಯೋಗ; ಏನೆಲ್ಲ ಬದಲಾವಣೆ ಇರಲಿದೆ?
ಮತದಾರರ ಪಟ್ಟಿಯ ನಿಖರತೆಯನ್ನು ಸುಧಾರಿಸುವ ಉದ್ದೇಶದಿಂದ ಭಾರತದ ಚುನಾವಣಾ ಆಯೋಗ ಹಲವು ಉಪಕ್ರಮಗಳನ್ನು ಪರಿಚಯಿಸಿದ್ದು, ಇದು ಮತದಾನ ಪ್ರಕ್ರಿಯೆಯನ್ನುಇನ್ನಷ್ಟು ಸರಳಗೊಳಿಸಲಿದೆ. ಮತದಾರರ ಪಟ್ಟಿಯನ್ನು ನವೀಕರಿಸಲು ಮರಣ ನೋಂದಣಿಯ ದತ್ತಾಂಶವನ್ನು ಪಡೆಯುವುದು, ಬೂತ್ ಮಟ್ಟ ಅಧಿಕಾರಿಗಳಿಗೆ ಪ್ರಮಾಣಿತ ಗುರುತಿನ ಚೀಟಿಗಳನ್ನು ನೀಡುವುದು ಮತ್ತು ಮತದಾರರ ಮಾಹಿತಿ ಚೀಟಿಗಳನ್ನು ಹೆಚ್ಚು ಮತದಾರರ ಸ್ನೇಹಿಯನ್ನಾಗಿ ಮಾಡುವುದು ಇದರಲ್ಲಿ ಸೇರಿದೆ.


ಹೊಸದಿಲ್ಲಿ: ಮತದಾರರ ಪಟ್ಟಿಯ ನಿಖರತೆಯನ್ನು ಸುಧಾರಿಸುವ ಉದ್ದೇಶದಿಂದ ಭಾರತದ ಚುನಾವಣಾ ಆಯೋಗ (Election Commission of India- EC) ಹಲವು ಉಪಕ್ರಮಗಳನ್ನು ಪರಿಚಯಿಸಿದ್ದು, ಇದು ಮತದಾನ ಪ್ರಕ್ರಿಯೆಯನ್ನುಇನ್ನಷ್ಟು ಸರಳಗೊಳಿಸಲಿದೆ. ಮುಖ್ಯವಾಗಿ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ನವೀಕರಿಸಲು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (Registrar General of India)ದಿಂದ ಮರಣ ನೋಂದಣಿಯ ಡೇಟಾವನ್ನು ಪಡೆದುಕೊಳ್ಳಲಿದೆ.
ಮತದಾರರ ಪಟ್ಟಿಯ ನಿಖರತೆಯನ್ನು ಸುಧಾರಿಸುವ ಉದ್ದೇಶದಿಂದ 3 ಹೊಸ ಉಪಕ್ರಮಗಳನ್ನು ಪರಿಚಯಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮತದಾರರ ಪಟ್ಟಿಯನ್ನು ನವೀಕರಿಸಲು ಮರಣ ನೋಂದಣಿಯ ದತ್ತಾಂಶವನ್ನು ಪಡೆಯುವುದು, ಬೂತ್ ಮಟ್ಟ ಅಧಿಕಾರಿಗಳಿಗೆ (BLO) ಪ್ರಮಾಣಿತ ಗುರುತಿನ ಚೀಟಿಗಳನ್ನು ನೀಡುವುದು ಮತ್ತು ಮತದಾರರ ಮಾಹಿತಿ ಚೀಟಿಗಳನ್ನು ಹೆಚ್ಚು ಮತದಾರರ ಸ್ನೇಹಿಯನ್ನಾಗಿ ಮಾಡುವುದು ಇದರಲ್ಲಿ ಸೇರಿದೆ.
ಚುನಾವಣಾ ಆಯೋಗದ ಪ್ರಕಟಣೆ ಇಲ್ಲಿದೆ:
The Election Commission of India introduced three new initiatives aimed at improving the accuracy of electoral rolls. These include obtaining data on death registration for updation of electoral rolls electronically, issuing standard identity cards to BLOs and making Voter… pic.twitter.com/Sj89qc9lbq
— ANI (@ANI) May 1, 2025
ಈ ಸುದ್ದಿಯನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗೆ ಚುನಾವಣಾ ಆಯೋಗ ಠಕ್ಕರ್; ಆರೋಪಗಳಿಗೆ ಮಣಿಯುವುದಿಲ್ಲ ಎಂದು ಟ್ವೀಟ್
"ಮತದಾರರ ಮಾಹಿತಿ ಸ್ಲಿಪ್‌ಗಳನ್ನು (Voter Information Slips) ಇನ್ನಷ್ಟು ಸರಳಗೊಳಿಸಲು ಚುನಾವಣಾ ಆಯೋಗವು ಅದರ ವಿನ್ಯಾಸವನ್ನು ಮಾರ್ಪಡಿಸಲು ನಿರ್ಧರಿಸಿದೆ. ಗುರುತಿಸಲು ಸಾಧ್ಯವಾಗುವಂತೆ ಮತದಾರರ ಕ್ರಮ ಸಂಖ್ಯೆ ಮತ್ತು ಪಾರ್ಟ್ ನಂಬರ್ ಅನ್ನು ಇನ್ನಷ್ಟು ಹೆಚ್ಚಿನ ಗಾತ್ರದೊಂದಿಗೆ ಪ್ರದರ್ಶಿಸಲಾಗುತ್ತದೆ. ಇದು ಮತದಾರರು ತಮ್ಮ ಮತಗಟ್ಟೆಯನ್ನು ಗುರುತಿಸಲು ಮತ್ತು ಮತಗಟ್ಟೆ ಅಧಿಕಾರಿಗಳಿಗೆ ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಪತ್ತೆಹಚ್ಚಲು ನೆರವಾಗುತ್ತದೆ" ಎಂದು ಚುನಾವಣಾ ಆಯೋಗ ತಿಳಿಸಿದೆ.
ಎಲ್ಲ ಬಿಎಲ್ಒಗಳಿಗೆ ಪ್ರಮಾಣಿತ ಫೋಟೋ ಗುರುತಿನ ಚೀಟಿಗಳನ್ನು ನೀಡಲಾಗುತ್ತದೆ. ಈ ಅಧಿಕಾರಿಗಳನ್ನು ಜನ ಪ್ರಾತಿನಿಧ್ಯ ಕಾಯ್ದೆ, 1950ರ ಸೆಕ್ಷನ್ 13 ಬಿ (2)ರ ಅಡಿಯಲ್ಲಿ ಚುನಾವಣಾ ನೋಂದಣಿ ಅಧಿಕಾರಿಗಳು (ERO) ನೇಮಕ ಮಾಡುತ್ತಾರೆ. ಇದರಿಂದ ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಬಿಎಲ್‌ಒಗಳನ್ನು ಗುರುತಿಸಲು ಮತದಾರರಿಗೆ ಸಾಧ್ಯವಾಗುತ್ತದೆ.
ಈ ಎಲ್ಲ ಕ್ರಮಗಳು ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಮತದಾರರು ಹಾಗೂ ಚುನಾವಣಾ ಅಧಿಕಾರಿಗಳ ನಡುವಿನ ಸಂವಹನವನ್ನು ಸುಧಾರಿಸಲು ನೆರವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.