Madhuri Dixit: 58ರ ವಸಂತಕ್ಕೆ ಕಾಲಿಟ್ಟ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್
ಯಾವುದೇ ಪಾತ್ರವಾದರೂ ಸರಿ ಅದಕ್ಕೆ ಸಂಪೂರ್ಣ ಜೀವ ತುಂಬುವ ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್ (Madhuri Dixit) ಇಂದು ತಮ್ಮ 58ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. 90ರ ದಶಕದಲ್ಲಿ ಬಾಲಿವುಡ್ ನ ರಾಣಿಯಾಗಿ ಮೆರೆದ ಮಾಧುರಿಯ ಪ್ರತಿಯೊಂದು ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯನ್ನೇ ಮಾಡಿತ್ತು. ನಟನೆ, ನೃತ್ಯ, ಪ್ರಣಯ ಅಥವಾ ಆಕ್ಷನ್ ಆಗಿರಲಿ ಪ್ರತಿಯೊಂದು ಪಾತ್ರಕ್ಕೂ ಸೈ ಎನ್ನುವಂತಹ ಅಭಿನಯ ಕೌಶಲ್ಯದಿಂದ ಇಂದಿಗೂ ಅವರು ಸಾಕಷ್ಟು ಸಿನಿ ಪ್ರೇಮಿಗಳ ಮನದಲ್ಲಿ ಹಾಗೆಯೇ ಉಳಿದುಕೊಂಡಿದ್ದಾರೆ.



ಮೋಹಿನಿ, ನಿಶಾ, ಚಂದ್ರಮುಖಿ.. ಹೀಗೆ ಅನೇಕ ಪಾತ್ರಗಳಿಗೆ ಜೀವ ತುಂಬಿದ ಬಾಲಿವುಡ್ ನ ಧಕ್ ಧಕ್ ಹುಡುಗಿಯಾಗಿದ್ದ ಮಾಧುರಿ ದೀಕ್ಷಿತ್ಗೆ ಈಗ 58ನೇ ಹುಟ್ಟುಹಬ್ಬದ ಸಂಭ್ರಮ. 1967ರ ಮೇ 15ರಂದು ಮುಂಬೈಯಲ್ಲಿ ಜನಿಸಿದ ಇವರು ಮುಂದೊಂದು ದಿನ ಬಾಲಿವುಡ್ನ ರಾಣಿಯಾಗಿ ಮೆರೆಯುತ್ತಾರೆ ಎನ್ನುವ ಕಲ್ಪನೆಯೂ ಯಾರಿಗೂ ಇರಲಿಲ್ಲ.

ದಿಲ್, ಸಾಜನ್, ಬೇಟಾ, ಹಮ್ ಅಪ್ಕೆ ಹೇ ಕೌನ್, ಕೊಯಿಲಾ, ದಿಲ್ ತೋ ಪಾಗಲ್ ಹೇ ಸೇರಿದಂತ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದ ಮಾಧುರಿ ದೀಕ್ಷಿತ್ ಅಭಿನಯದ ಪ್ರತಿಯೊಂದು ಚಿತ್ರವು 90ರ ದಶಕದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯನ್ನೇ ಮಾಡಿತ್ತು. ನಟನೆ, ನೃತ್ಯ, ಪ್ರಣಯ ಅಥವಾ ಆಕ್ಷನ್... ಹೀಗೆ ಪ್ರತಿಯೊಂಡು ಪಾತ್ರಕ್ಕೂ ಜೀವ ತುಂಬುತ್ತಿದ್ದ ಮಾಧುರಿ ಅವರ ವೈಯಕ್ತಿಕ ಜೀವನವು ಅವರ ವೃತ್ತಿಪರ ಜೀವನದಷ್ಟೇ ಬಣ್ಣದಿಂದ ತುಂಬಿದೆ.

ನಟರಾದ ಸಂಜಯ್ ದತ್, ಅನಿಲ್ ಕಪೂರ್ ಮತ್ತು ಕ್ರಿಕೆಟಿಗ ಅಜಯ್ ಜಡೇಜಾ ಅವರೊಂದಿಗೆ ಸಂಬಂಧ ಹೊಂದಿದ್ದ ಮಾಧುರಿ ಕೊನೆಗೆ ಕೈ ಹಿಡಿದಿದ್ದು ಅಮೆರಿಕದಲ್ಲಿ ಹೃದಯ ತಜ್ಞರಾಗಿರುವ ಡಾ. ಶ್ರೀರಾಮ್ ಮಾಧವ್ ನೇನೆ ಅವರನ್ನು ಮಾಧುರಿ ಮತ್ತು ನೆನೆ ದಂಪತಿಗೆ ಅರಿನ್ ನೇನೆ, ರಯಾನ್ ನೇನೆ ಎಂಬ ಇಬ್ಬರು ಮಕ್ಕಳಿದ್ದಾರೆ.

ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಜೋಡಿಯನ್ನು ಸಿನಿ ಪ್ರೇಕ್ಷಕರು ತುಂಬಾ ಇಷ್ಟಪಟ್ಟಿದ್ದರು. ಈ ಜೋಡಿ ರಾಮ್ ಲಖನ್, ಪರಿಂದಾ ಮತ್ತು ಬೇಟಾದಂತಹ ಚಿತ್ರಗಳಲ್ಲಿ ಮೋಡಿ ಮಾಡಿತ್ತು. ಇವರಿಬ್ಬರ ಪ್ರೇಮ ಸಂಬಂಧದ ಕುರಿತು ಸುದ್ದಿ ಜೋರಾದಾಗ ಅನಿಲ್ ಪತ್ನಿ ತಮ್ಮ ಮಕ್ಕಳೊಂದಿಗೆ ಚಿತ್ರೀಕರಣದ ಸೆಟ್ ಗೂ ಹೋಗಿದ್ದರು. ಬಳಿಕ ಹಲವು ವರ್ಷಗಳ ಅನಂತರ ಅನಿಲ್ ಮತ್ತು ಮಾಧುರಿ ಜೋಡಿ ಪುಕಾರ್ ಹಾಗೂ ಟೋಟಲ್ ಧಮಾಲ್ನಲ್ಲಿ ಮಿಂಚಿತ್ತು.

ಸಾಜನ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಂಜಯ್ ದತ್ ಜೊತೆಗೂ ಮಾಧುರಿ ದೀಕ್ಷಿತ್ ಹೆಸರು ತಳುಕು ಹಾಕಿಕೊಂಡಿತ್ತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭಾರಿ ಯಶಸ್ಸನ್ನು ಕಂಡಿತು. ಅನಂತರ ಈ ಜೋಡಿ 1993ರಲ್ಲಿ ಖಲ್ನಾಯಕ್ ಕಾಣಿಸಿಕೊಂಡಿತ್ತು. ಆಗ ನಿರ್ದೇಶಕ ಸುಭಾಷ್ ಘಾಯ್ ಅವರು ಚಿತ್ರದ ಚಿತ್ರೀಕರಣದ ಅವಧಿಯಲ್ಲಿ 'ಗರ್ಭಧಾರಣೆ ಇಲ್ಲ' ಎಂಬ ಷರತ್ತಿಗೆ ಸಹಿ ಹಾಕಿಸಿದರು. ಈ ಮೂಲಕ ನಾಯಕಿಯೊಬ್ಬಳಿಂದ ಇಂತಹ ಒಪ್ಪಂದಕ್ಕೆ ಸಹಿ ಹಾಕಿಸಿದ ಮೊದಲ ನಿರ್ದೇಶಕ ಎಂದೆನಿಸಿಕೊಂಡರು ಸುಭಾಷ್ ಘಾಯ್. ಒಂದು ವೇಳೆ ಈ ಒಪ್ಪಂದ ಮುರಿದರೆ ಮಾಧುರಿ ಭಾರಿ ದಂಡವನ್ನು ತೆರಬೇಕಾಗಿತ್ತು.

ನಟರೊಂದಿಗೆ ಮಾತ್ರವಲ್ಲ ಮಾಧುರಿಯ ಹೆಸರು ಕ್ರಿಕೆಟಿಗ ಅಜಯ್ ಜಡೇಜಾ ಜೊತೆಗೂ ತಳುಕು ಹಾಕಿಕೊಂಡಿತ್ತು. ಇವರಿಬ್ಬರು ಒಂದು ಜಾಹೀರಾತಿನ ಫೋಟೋಶೂಟ್ ಸಮಯದಲ್ಲಿ ಭೇಟಿಯಾಗಿದ್ದರು. ಆದರೆ ಅಜಯ್ ಹೆಸರು ಮ್ಯಾಚ್ ಫಿಕ್ಸಿಂಗ್ ವಿವಾದದಲ್ಲಿ ಕೇಳಿಬಂದ ಬಳಿಕ ಇವರಿಬ್ಬರು ದೂರವಾದರು.

ಮಾಧುರಿ ದೀಕ್ಷಿತ್ ಗೆ ಅವರ ತಂದೆ ಶಂಕರ್ ದೀಕ್ಷಿತ್ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಲು ಬಯಸಿದ್ದರು. ಇದಕ್ಕಾಗಿ ಅನೇಕ ಸಂಬಂಧಗಳನ್ನು ನೋಡಿದ್ದರು. ಪ್ರಸಿದ್ಧ ಗಾಯಕ ಸುರೇಶ್ ವಾಡ್ಕರ್ ಕೂಡ ಅವರಲ್ಲಿ ಒಬ್ಬರು. ಆದರೆ ಮಾಧುರಿಯ ಫೋಟೋವನ್ನು ನೋಡಿ ಹುಡುಗಿ ತುಂಬಾ ತೆಳ್ಳಗಿದ್ದಾಳೆ ಎಂದು ಹೇಳಿ ತಿರಸ್ಕರಿಸಿದ್ದರು.

ಎಂಟನೇ ವಯಸ್ಸಿನಲ್ಲಿ ವೇದಿಕೆ ಏರಿ ನೃತ್ಯ ಪ್ರದರ್ಶನ ಮಾಡಿದ್ದ ಮಾಧುರಿ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ನಿಪುಣರಾಗಿದ್ದರು. ಕಥಕ್ ನಲ್ಲಿ ವಿದ್ಯಾರ್ಥಿ ವೇತವನವನ್ನು ಪಡೆದಿದ್ದ ಮಾಧುರಿಯ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಾಗಿ ಇಂದು ಅವರು ಸಿನಿ ರಂಗದ ಅತ್ಯುತ್ತಮ ನೃತ್ಯಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ.

ಮಾಧುರಿಯ ಕುಟುಂಬಕ್ಕೆ ಅವರು ಸಿನಿಮಾ ರಂಗಕ್ಕೆ ಬರುವುದು ಇಷ್ಟವಿರಲಿಲ್ಲ. ಮಾಧುರಿ ಕೂಡ ತಾವು ವೈದ್ಯರಾಗಬೇಕು ಎಂದು ಬಯಸಿದ್ದರು. ಆದರೆ ಶಾಲೆಯಲ್ಲಿ ಓದುತ್ತಿದ್ದಾಗಲೇ ಅವರಿಗೆ ರಾಜಶ್ರೀ ಪ್ರೊಡಕ್ಷನ್ಸ್ನ ಅಬೋಧ್ ಚಿತ್ರಕ್ಕಾಗಿ ಆಫರ್ ಬಂದಿತ್ತು. ಆದರೆ ಅವರ ಕುಟುಂಬ ಇದಕ್ಕೆ ಒಪ್ಪಲಿಲ್ಲ. ಆದರೆ ಕೊನೆಗೆ ನಿರ್ಮಾಣ ಸಂಸ್ಥೆಯವರು ಅವರ ಮನ ವೊಲಿಸಿದರು. ಬಳಿಕ ಮಾಧುರಿಯ ಚಲನಚಿತ್ರ ಪ್ರಯಾಣ ಪ್ರಾರಂಭವಾಯಿತು.

ಮೊದಲ ಚಿತ್ರವೇ ಪ್ಲಾಫ್ ಆದರೂ ಮಾಧುರಿಯ ನಟನೆಯನ್ನು ಬಹಳಷ್ಟು ಪ್ರಶಂಸಿಸಲಾಯಿತು. ಬಳಿಕ ಹಲವಾರು ಚಿತ್ರಗಳಿಗೆ ಆಫರ್ ಗಳು ಬರಲಾರಂಭಿಸಿತು. ಅಬೋಧ್ ಬಳಿಕ ಸ್ವಾತಿ, ಮಾನವ್ ಹತ್ಯಾ, ಹಿಫಾಜತ್, ಉತ್ತರ ದಕ್ಷಿಣ್ ಚಿತ್ರಗಳಲ್ಲಿ ಕೆಲಸ ಮಾಡಿದರು. ಆದರೆ ಎಲ್ಲವೂ ಸೋತಿತು. 1988ರಲ್ಲಿ ದಯಾವನ್ ಚಿತ್ರದಲ್ಲಿ ವಿನೋದ್ ಖನ್ನಾಗೆ ಜೋಡಿಯಾಗಿ ನಟಿಸಿದ ಮಾಧುರಿಯವರ ಮೊದಲ ಹಿಟ್ ಫಿಲಂ ಇದಾಯಿತು.

ಸುಮಾರು 72 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಮಾಧುರಿ ದೀಕ್ಷಿತ್ ಅವರು ದಿಲ್ ತೋ ಪಾಗಲ್ ಹೈ ಚಿತ್ರದ ಅವಧಿಯಲ್ಲಿ 2.7 ರಿಂದ 3 ಕೋಟಿ ರೂ.ಗಳಷ್ಟು ಸಂಭಾವನೆ ಪಡೆಯುತ್ತಿದ್ದರು. ಇದು ಆಗ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಸಂಭಾವನೆಗಿಂತ ಹೆಚ್ಚಾಗಿತ್ತು.

2008ರಲ್ಲಿ ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಮಾಧುರಿ ದೀಕ್ಷಿತ್ ಅಭಿನಯದ ಹಮ್ ಆಪ್ಕೆ ಹೈ ಕೌನ್..! ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ನಟಿ ಸೇರಿದಂತೆ ಐದು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಜೊತೆಗೆ ಅತ್ಯುತ್ತಮ ಜನಪ್ರಿಯ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.