Vishwavani Editorial: ಷಡ್ರಸವನ್ನು ಉಣಿಸಬೇಕಿಲ್ಲ...!
ದೇಗುಲದ ಗರ್ಭಗುಡಿಯಲ್ಲಿರುವ ಮೂರ್ತಿಗಳಲ್ಲಿ ಮಾತ್ರವಲ್ಲದೆ, ಗಿಡ-ಮರ, ಪ್ರಾಣಿ-ಪಕ್ಷಿ, ಕಲ್ಲು-ಮಣ್ಣಿನಲ್ಲೂ ದೇವರನ್ನು ಕಾಣುವ ಸಂಸ್ಕೃತಿ ಮತ್ತು ಪರಂಪರೆ ನಮ್ಮದು. ಅಂತೆಯೇ, ಹುಲಿ, ಸಿಂಹ, ವೃಷಭ, ನವಿಲು ಮುಂತಾದ ಪ್ರಾಣಿ-ಪಕ್ಷಿಗಳನ್ನು ನಿರ್ದಿಷ್ಟ ದೇವರುಗಳ ವಾಹನಗಳಾಗಿ ಪರಿಕಲ್ಪಿಸಿ ಕೊಂಡಿರುವ ಸಮಾಜ ನಮ್ಮದು.


ಪುರಂದರದಾಸರು ಬರೆದಿರುವ ‘ಧರ್ಮಕೆ ಜಯವೆಂಬ ದಿವ್ಯ ಮಂತ್ರ’ ಎಂಬ ಗೀತೆಯಲ್ಲಿ ‘ವಿಷ ವಿಕ್ಕಿದವಗೆ ಷಡ್ರಸವನುಣಿಸಲಿ ಬೇಕು..’ ಎಂಬ ಒಂದು ಸಾಲು ಬರುತ್ತದೆ. ತಮಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾಗುವವರಿಗೆ ಅಥವಾ ಪ್ರತೀಕಾರವನ್ನೇ ಉಸಿರಾಗಿಸಿಕೊಂಡಿರು ವವರಿಗೆ ಹಿತವಚನವನ್ನು ಹೇಳುವ ಉದ್ದೇಶದೊಂದಿಗೆ ಮೂಡಿರುವ ಗೀತೆಯಿದು.
‘ಧರ್ಮ’ದ ನೆಲೆಯಲ್ಲಿ ಇದು ಅನುಕರಣೀಯ ಹಿತನುಡಿಯೇ; ಆದರೆ ಅಕ್ಷಮ್ಯ ಅಪರಾಧ ಎಸಗಿದ ದುರುಳರ ಹೆಡೆಮುರಿ ಕಟ್ಟುವ ವಿಷಯ ಬಂದಾಗ ಇಂಥ ದಾಕ್ಷಿಣ್ಯವನ್ನು ತೋರುವ ಅಗತ್ಯವಿಲ್ಲ ಎನಿಸುತ್ತದೆ. ಮಲೆ ಮಹದೇಶ್ವರ ವನ್ಯಜೀವಿ ವಲಯದಲ್ಲಿ ಐದು ಹುಲಿಗಳಿಗೆ ವಿಷವುಣಿಸಿ ಅವುಗಳ ಸಾವಿಗೆ ಕಾರಣರಾದ ಆರೋಪಿಗಳ ಕುರಿತಾದ ಸುದ್ದಿಯನ್ನು ಓದಿದಾಗ, ಪ್ರಾಣಿಪ್ರಿಯರ ಮನದಲ್ಲಿ ಇಂಥದೊಂದು ಅಭಿಪ್ರಾಯ ಹಾದುಹೋಗಿದ್ದರೆ ಅದೇನೂ ಅಚ್ಚರಿಯಲ್ಲ.
ಇದನ್ನೂ ಓದಿ: Vishwavani Editorial: ಕೆನಡಾ ಸಂಬಂಧ ಸುಧಾರಣೆ
ದೇಗುಲದ ಗರ್ಭಗುಡಿಯಲ್ಲಿರುವ ಮೂರ್ತಿಗಳಲ್ಲಿ ಮಾತ್ರವಲ್ಲದೆ, ಗಿಡ-ಮರ, ಪ್ರಾಣಿ-ಪಕ್ಷಿ, ಕಲ್ಲು-ಮಣ್ಣಿನಲ್ಲೂ ದೇವರನ್ನು ಕಾಣುವ ಸಂಸ್ಕೃತಿ ಮತ್ತು ಪರಂಪರೆ ನಮ್ಮದು. ಅಂತೆಯೇ, ಹುಲಿ, ಸಿಂಹ, ವೃಷಭ, ನವಿಲು ಮುಂತಾದ ಪ್ರಾಣಿ-ಪಕ್ಷಿಗಳನ್ನು ನಿರ್ದಿಷ್ಟ ದೇವರುಗಳ ವಾಹನಗಳಾಗಿ ಪರಿಕಲ್ಪಿಸಿಕೊಂಡಿರುವ ಸಮಾಜ ನಮ್ಮದು.
ಹೀಗಿರುವಾಗ, ತಮ್ಮ ಸ್ವಾರ್ಥ-ಲಾಲಸೆಗೆಂದು ಮತ್ತೊಂದು ಜೀವಕ್ಕೆ ವಿಷವಿಡುವಂಥ ಕೃತ್ಯವನ್ನು ಸಮರ್ಥಿಸಲಾದೀತೇ? ಹುಲಿಗೆ ವಿಷವಿಡಲು ಮುಂದಾಗುವವರ, ಜಿಂಕೆಯಂಥ ಸಾಧುಪ್ರಾಣಿಯ ಕೊಂಬನ್ನು ಕತ್ತರಿಸುವವರ, ಆನೆಯ ದಂತವನ್ನು ತರಿಯಲು ತವಕಿಸುವವರ ಧಾರ್ಷ್ಟ್ಯವನ್ನು ಯಾವ ಕಾರಣಕ್ಕೂ ಸಹಿಸಲಾಗುವುದಿಲ್ಲ. ದಿನಗಳೆದಂತೆ ಹುಲಿಗಳ ಸಂತತಿ ಕ್ಷೀಣಿಸುತ್ತಿದೆ ಎಂಬ ಅಳಲು ಎಲ್ಲೆಡೆಯಿಂದ ಕೇಳಿಬರುತ್ತಿರುವಾಗ, ಹುಲಿಗಳ ಅಸ್ತಿತ್ವದ ವಿಷಯದಲ್ಲಿ ಗಮನಾರ್ಹ ಸ್ಥಾನವನ್ನು ದಕ್ಕಿಸಿಕೊಂಡಿದ್ದ ಕರ್ನಾಟಕದಲ್ಲೇ ಇಂಥದೊಂದು ಬೆಳವಣಿಗೆಯಾಗಿರುವುದು ವಿಷಾದನೀಯ.
ಅರಣ್ಯ ಪ್ರದೇಶದಲ್ಲಿ ಅಥವಾ ಮತ್ತಾವುದೇ ವನ್ಯಜೀವಿ ವಲಯದಲ್ಲಿ ಕಳ್ಳಬೇಟೆಗೆ ಮುಂದಾಗು ವವರಿಗೆ ಇನ್ನಾದರೂ ತಕ್ಕ ಶಾಸ್ತಿ ಆಗಲೇಬೇಕು. ಇದು ಈ ಕ್ಷಣದ ಅನಿವಾರ್ಯತೆಯೂ ಹೌದು.