ಭಾರಿ ಮಳೆಯ ಕಾರಣ RCB vs SRH ಪಂದ್ಯವನ್ನು ಬೆಂಗಳೂರಿನಿಂದ ಲಖನೌಗೆ ಸ್ಥಳಾಂತರ!
RCB vs SRH: ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಮೇ 23 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯವನ್ನು ಲಖನೌದ ಏಕನಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಹಾಗಾಗಿ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ, ತನ್ನ ಕೊನೆಯ ಎರಡು ಲೀಗ್ ಪಂದ್ಯಗಳನ್ನು ಲಖನೌದಲ್ಲಿ ಆಡಲಿದೆ.

ಪ್ಯಾಟ್ ಕಮಿನ್ಸ್-ವಿರಾಟ್ ಕೊಹ್ಲಿ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಹವಾಮಾನ ವೈಫರಿತ್ಯದ ಕಾರಣ ಮೇ 23 ರಂದು ನೆಡಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ (RCB vs SRH) ನಡುವಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯವನ್ನು ಲಖನೌದ ಏಕನಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ (Royal Challengers Bengaluru) ತಂಡದ ಕೊನೆಯ ಎರಡು ಲೀಗ್ ಪಂದ್ಯಗಳು ಲಖನೌದಲ್ಲಿ ನಡೆಯಲಿವೆ. ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ಮೇ 27 ರಂದು ಆತಿಥೇಯ ಲಖನೌ ಸೂಪರ್ ಜಯಂಟ್ಸ್ ತಂಡದ ಪರ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.
ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯ ಕಾರಣ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಣ ಪಂದ್ಯ ನಡೆಯುವುದು ಅನುಮಾನ. ಇದಕ್ಕೂ ಮುನ್ನ ಮೇ 17 ರಂದು ಆರ್‌ಸಿಬಿ ಹಾಗೂ ಕೋಲ್ಕತಾ ನೈಡ್ ರೈಡರ್ಸ್ ನಡುವಣ ಪಂದ್ಯ ಕೂಡ ಮಳೆಯಿಂದಾಗಿ ಟಾಸ್ ಕಾಣದೆ ರದ್ದಾಗಿತ್ತು. ಇದೀಗ ಪ್ಲೇಆಫ್ಸ್ ಕಾರಣ ಆರ್‌ಸಿಬಿ ಮುಂದಿನ ಎರಡು ಪಂದ್ಯಗಳು ತುಂಬಾ ಮುಖ್ಯವಾಗಿವೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ, ಎಸ್‌ಆರ್‌ಎಚ್ ಹಾಗೂ ಆರ್‌ಸಿಬಿ ಪಂದ್ಯವನ್ನು ಸ್ಥಳಾಂತರಿಸಿದೆ.
IPL 2025: ಟೂರ್ನಿಯ ಪ್ಲೇಆಫ್ಸ್ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದ ಬಿಸಿಸಿಐ!
"ಬೆಂಗಳೂರಿನ ಹವಾಮಾನ ವೈಪರಿತ್ಯದ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಣ ಟಾಟಾ ಐಪಿಎಲ್ ಟೂರ್ನಿಯ 65ನೇ ಪಂದ್ಯವನ್ನು ಲಖನೌದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿಆಡಿಸಲಾಗುತ್ತಿದೆ," ಎಂದು ಐಪಿಎಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
"ಐಪಿಎಲ್ ಟೂರ್ನಿಯ ಪ್ಲೇಆಫ್ಸ್ ಪಂದ್ಯಗಳಂತೆ ಮೇ 20 ರಿಂದ ನಡೆಯುವ ಲೀಗ್ ಹಂತದ ಪಂದ್ಯಗಳಿಗೂ ಕೂಡ ಹೆಚ್ಚುವರಿ ಒಂದು ಗಂಟೆಯನ್ನು ನಿಗದಿಪಡಿಸಲಾಗಿದೆ," ಎಂದು ಹೇಳಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಮೇ 19 ರಂದು ಲಖನೌದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ದ ತನ್ನ ಕೊನೆಯ ಪಂದ್ಯವನ್ನು ಆಡಿತ್ತು. ಈ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೀ ಟೂರ್ನಿಯಲ್ಲಿ ನಾಲ್ಕನೇ ಗೆಲುವು ದಾಖಲಿಸಿತು. ಆದರೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇಆಫ್ಸ್ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಕನಿಷ್ಠ ಇನ್ನುಳಿದ ಎರಡೂ ಪಂದ್ಯಗಳನ್ನು ಗೆದ್ದು ಗೌರವಯುತವಾಗಿ ಟೂರ್ನಿಯನ್ನು ಮುಗಿಸಲು ಎದುರು ನೋಡುತ್ತಿದೆ.
IPL 2025: ನಾಯಕನಾಗಿ ರಿಷಭ್ ಪಂತ್ ವೈಫಲ್ಯಕ್ಕೆ ಕಾರಣ ತಿಳಿಸಿದ ಮೊಹಮ್ಮದ್ ಕೈಫ್!
ಐಪಿಎಲ್ 2025 ಫೈನಲ್ ಪಂದ್ಯ ಎಲ್ಲಿ?
ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಣ ಪಂದ್ಯವನ್ನು ಲಖನೌಗೆ ಸ್ಥಳಾಂತರಿಸಿದ ಜತೆಗೆ ಐಪಿಎಲ್ ಪ್ಲೇಆಫ್ಸ್ ಪಂದ್ಯಗಳ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ನವ ಚಂಡೀಗಢದ ಪಿಸಿಎ ಕ್ರೀಡಾಂಗಣದಲ್ಲಿ ಮೊದಲನೇ ಕ್ವಾಲಿಫೈಯರ್ ಪಂದ್ಯ ಹಾಗೂ ಎಲಿಮಿನೇಟರ್ ಪಂದ್ಯಗಳನ್ನು ಆಡಿಸಲಾಗುತ್ತದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯ ನಡೆಯಲಿದೆ.