Vishwavani Special: ಪಿಎನ್‌ಬಿಗೆ ಚೋಕ್ ನೀಡಿದ ಚೋಕ್ಸಿ
2024ರ ಜುಲೈನಲ್ಲಿ ಚೋಕ್ಸಿ ಚಿಕಿತ್ಸೆಗಾಗಿ ಆಂಟ್‌ವೆರ್ಪ್‌ಗೆ ತೆರಳಿರುವುದನ್ನು ‘ಜಿಒಸಿ’ ಕಂಡುಕೊಂಡಿತು. ಆಂಟಿಗುವಾ ದೇಶದ ಜತೆಗೆ ಭಾರತ, ಅಪರಾಧಿಗಳ ಹಸ್ತಾಂತರ ಒಪ್ಪಂದ ಮಾಡಿಕೊಂಡಿಲ್ಲವಾದ ಕಾರಣ ಚೋಕ್ಸಿಯನ್ನು ಡೊಮೆನಿಕಾ ದಿಂದ ಎಳೆದು ತರುವುದು ಸಿಬಿಐಗೆ ಅಸಾಧ್ಯವಾಗಿತ್ತು. ಹಾಗಾಗಿ ಚೋಕ್ಸಿಯನ್ನು ಡೊಮೆನಿಕಾದಿಂದ ಹೊರಬರುವವರೆಗೂ ಕಾಯುವುದು ಅನಿವಾರ್ಯವಾಯಿತು.


ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಗೆ 6100 ಕೋಟಿ ರು. ವಂಚನೆ ಮಾಡಿ ಭಾರತದಿಂದ ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿಯ (64) ಬೆನ್ನುಬಿದ್ದಿದ್ದ ‘ಕೇಂದ್ರೀಯ ತನಿಖಾ ಸಂಸ್ಥೆ’(ಸಿಬಿಐ), ಡೊಮಿನಿಕಾ ದೇಶದಿಂದ ಆತನನ್ನು ಕರೆತರಲು 2021ರಲ್ಲೇ ಪ್ರಯತ್ನ ನಡೆಸಿ ವಿಫಲವಾಯಿತು. ಏಕೆಂದರೆ, ಚೋಕ್ಸಿ 2017ರಲ್ಲೇ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದಿದ್ದ. ಅದರ ಆಧಾರದ ಮೇಲೆ ಆಂಟಿಗುವಾದಲ್ಲಿ ಸುರಕ್ಷಿತವಾಗಿ ನೆಲೆಗೊಂಡ. ಹಾಗಿದ್ದೂ ಸಿಬಿಐ ಕೈಚೆಲ್ಲಲಿಲ್ಲ. ಚೋಕ್ಸಿಯ ಚಲನವಲನವನ್ನು ದಾಖಲಿಸಿಕೊಳ್ಳುತ್ತಲೇ ಇತ್ತು. ‘ಸಿಬಿಐ’ನ ಏಜೆನ್ಸಿಯಾದ ‘ಜಾಗತಿಕ ಮಟ್ಟದ ಕಾರ್ಯಾಚರಣೆಗಳ ಕೇಂದ್ರ’(ಜಿಒಸಿ)ವು ಭಾರತದ ಮೋಸ್ಟ್ ವಾಂಟೆಡ್ ವಂಚಕ ಎಲ್ಲೆಲ್ಲಿ ಹೋದರೂ ಆತನ ಹೆಜ್ಜೆ ಗುರುತನ್ನು ಕಂಡುಕೊಳ್ಳುತ್ತಿತ್ತು.
2024ರ ಜುಲೈನಲ್ಲಿ ಚೋಕ್ಸಿ ಚಿಕಿತ್ಸೆಗಾಗಿ ಆಂಟ್‌ವೆರ್ಪ್‌ಗೆ ತೆರಳಿರುವುದನ್ನು ‘ಜಿಒಸಿ’ ಕಂಡುಕೊಂಡಿತು. ಆಂಟಿಗುವಾ ದೇಶದ ಜತೆಗೆ ಭಾರತ, ಅಪರಾಧಿಗಳ ಹಸ್ತಾಂತರ ಒಪ್ಪಂದ ಮಾಡಿಕೊಂಡಿಲ್ಲವಾದ ಕಾರಣ ಚೋಕ್ಸಿಯನ್ನು ಡೊಮೆನಿಕಾ ದಿಂದ ಎಳೆದು ತರುವುದು ಸಿಬಿಐಗೆ ಅಸಾಧ್ಯವಾಗಿತ್ತು. ಹಾಗಾಗಿ ಚೋಕ್ಸಿಯನ್ನು ಡೊಮೆನಿಕಾದಿಂದ ಹೊರಬರುವವರೆಗೂ ಕಾಯುವುದು ಅನಿವಾರ್ಯವಾಯಿತು.
ಕ್ಯಾನ್ಸರ್ ಪೀಡಿತನಾದ ಚೋಕ್ಸಿ, ಉತ್ತಮ ಚಿಕಿತ್ಸೆ ಅರಸಿ ಬ್ರೆಜಿಲ್‌ನ ಬ್ರುಸೆಲ್ಸ್‌ಗೆ ತೆರಳಿದ್ದಾನೆ ಎಂಬುದು ತಿಳಿಯುತ್ತಿದ್ದಂತೆಯೇ ‘ಸಿಬಿಐ’ ಅಧಿಕಾರಿಗಳು ಚುರುಕಾದರು. ಈ ಬಾರಿ ಅವಕಾಶ ಕೈತಪ್ಪದಂತೆ ನೋಡಿಕೊಳ್ಳಲು ಯೋಜಿಸಿದ ಸಿಬಿಐ, ಬ್ರೆಜಿಲ್ ಪೊಲೀಸರಿಗೆ ಮನವಿ ಮಾಡಿ, ಚೋಕ್ಸಿ ಆಸ್ಪತ್ರೆ ಯಲ್ಲಿರುವಾಗಲೇ ಬಂಧ ವಾಗುವಂತೆ ನೋಡಿಕೊಂಡರು.
ಇದನ್ನೂ ಓದಿ: Dr N Someshwara Column: ಕ್ಷಯ ಚಿಕಿತ್ಸೆಯು ನಡೆದು ಬಂದ ದಾರಿ
ನೆರವಿಗೆ ಬಂದ ಶತಮಾನದ ಒಪ್ಪಂದ
ಬ್ರೆಜಿಲ್ ಜತೆ 1901ರಲ್ಲೇ ಭಾರತ ಸರಕಾರ (ಆಗ ಬ್ರಿಟಿಷರ ಆಡಳಿತ) ಹಸ್ತಾಂತರ ಒಪ್ಪಂದ ಮಾಡಿಕೊಂಡಿದೆ. ಈಗ 124 ವರ್ಷಗಳ ಬಳಿಕವೂ ಅದು ಭಾರತದ ಕಾನೂನು ಅಧಿಕಾರಿಗಳ ನೆರವಿಗೆ ಬಂದಿದೆ.
ಗಡಿಪಾರು ಕೋರಿಕೆ
ವಂಚಕ ಮೆಹುಲ್ ಚೋಕ್ಸಿಯನ್ನು ಗಡಿಪಾರು ಮಾಡುವುದಕ್ಕೆ ಅವಕಾಶವಾಗುವಂತೆ ಸಿಬಿಐ ಅಧಿಕಾರಿಗಳು, ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಭ್ರಷ್ಟಾಚಾರ ತಡೆ ಕಾಯಿದೆ ಹಾಗೂ ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಎಗೆನೆಸ್ಟ್ ಟ್ರಾನ್ಸ್ ನ್ಯಾಷನಲ್ ಆರ್ಗನೈಸ್ಡ್ ಕ್ರೈಂ(ಯು ಎನ್ ಟಿಒಸಿ) ಮತ್ತು ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಎಗೆನೆಸ್ಟ್ ಕರಪ್ಷನ್(ಯು ಎನ್‌ಸಿಎಸಿ)ನ ನಿಯಮ ಗಳನ್ನು ಉಲ್ಲೇಖಿಸಿ ಬ್ರೆಜಿಲ್‌ನ ನ್ಯಾಯಾಲಯಕ್ಕೆ ಮನವಿ ಮಾಡಲು ಸಿದ್ಧತೆ ನಡೆಸಿದ್ದಾರೆ.
‘ಐಪಿಸಿ’ಯ ಸೆಕ್ಷನ್ 120ಬಿ(ಅಪರಾಧಿಕ ಸಂಚು), 201(ಸಾಕ್ಷ್ಯಗಳ ನಾಶ), 409(ನಂಬಿಕೆ ನಾಶ), 420(ವಂಚನೆ), 477ಎ(ಖಾತೆಗಳಲ್ಲಿ ತಪ್ಪು ಮಾಹಿತಿ) ಹಾಗೂ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 7 ಮತ್ತು 13ರ ಅನ್ವಯ ಆರೋಪಿ ಮೆಹುಲ್ ಚೋಕ್ಸಿ ವಿರುದ್ಧ ದೋಷಾರೋಪ ಮಾಡಿರುವು ದನ್ನೂ ಉಲ್ಲೇಖಿಸಲಾಗಿದೆ.
ಜತೆಗೆ, ಮುಂಬೈನ ನ್ಯಾಯಾಲಯ 2018ರ ಮೇ 23ರಂದು ಹಾಗೂ 2021ರ ಜೂ.15ರಂದು ಘೋಷಿತ ಅಪರಾಧಿ ಮೆಹುಲ್ ಚೋಕ್ಸಿ ವಿರುದ್ಧ ಹೊರಡಿಸಿರುವ ನಾನ್ ಬೇಯ್ಲಬಲ್ ವಾರಂಟ್(ಜಾಮೀನು ರಹಿತ ಬಂಧನ ವಾರಂಟ್) ಪ್ರತಿಯನ್ನೂ ಲಗತ್ತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಬೆಲ್ಜಿಯಂ ದೇಶದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಭಾರತದ ಮೋಸ್ಟ್ ವಾಂಟೆಡ್ ಹಾಗೂ ಘೋಷಿತ ಅಪರಾಧಿ ಮೆಹುಲ್ ಚೋಕ್ಸಿಯನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರ ಮಾಡಲು ಪ್ರಕ್ರಿಯೆ ಆರಂಭಿಸುವಂತೆ ಸಿಬಿಐ ಹಲವು ಹಂತಗಳಲ್ಲಿ ಬೆಲ್ಜಿಯಂ ಸರಕಾರ ಮತ್ತು ನ್ಯಾಯಾ ಲಯಕ್ಕೆ ಮನವಿ ಮಾಡಿದೆ. ಅದಕ್ಕೆ ತಕ್ಕದಾದ ದಾಖಲೆಗಳು, ಸಾಕ್ಷ್ಯಗಳನ್ನೂ ಸಲ್ಲಿಸಿದೆ.
ಪರಿಣಾಮವಾಗಿ ಬೆಲ್ಜಿಯಂ ಸರಕಾರ ಮೆಹುಲ್ ಚೋಕ್ಸಿಯನ್ನು ಬಂಧಿಸಲು ಕ್ರಮ ಕೈಗೊಂಡಿದೆ. ಬೆಲ್ಜಿಯಂ ನ್ಯಾಯಾಲಯ ಕೂಡಾ ಪೊಲೀಸರ ಕೋರಿಕೆ ಮೇರೆಗೆ ಆಸ್ಪತ್ರೆಯಲ್ಲಿದ್ದ ಚೋಕ್ಸಿ ಬಂಧನಕ್ಕೆ 2024ರ ನವೆಂಬರ್ ನಲ್ಲಿ ‘ಆರ್ಡರ್ ಆಫ್ ಅರೆಸ್ಟ್’ (ಬಂಧನಕ್ಕೆ ಆದೇಶ) ಹೊರಡಿಸಿದೆ. ಇಷ್ಟೆಲ್ಲಾ ಪ್ರಕ್ರಿಯೆಗಳನ್ನೂ ಸಿಬಿಐ ಅಧಿಕಾರಿ ಚೋಕ್ಸಿಗೆ ಸಣ್ಣ ಸುಳಿವೂ ಸಿಗದಂತೆ ಎಚ್ಚರ ವಹಿಸಿ ನಡೆಸಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಏ.12ರಂದು ವಂಚಕ ಮೆಹುಲ್ ಚೋಕ್ಸಿಯನ್ನು ಆಸ್ಪತ್ರೆಯಲ್ಲಿಯೇ ಬಂಧಿಸಿದ ಬೆಲ್ಜಿಯಂ ಪೊಲೀಸರು, ಬಳಿಕ ಭಾರತದ ಅಽಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈಗಲೂ ಪಾರಾಗಲು ಚೋಕ್ಸಿ ಯತ್ನ
ಭಾರತದಿಂದ ಸಿಬಿಐನ ಹಿರಿಯ ಅಧಿಕಾರಿಗಳ ತಂಡ ಬೆಲ್ಜಿಯಂಗೆ ತೆರಳಿದೆ. ಬಹುಕೋಟಿ ವಂಚಕ ಚೋಕ್ಸಿಯನ್ನು ಎಳೆದು ತರಲು ಅಗತ್ಯವಾದ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದೆ. ಆದರೆ. ಮೆಹುಲ್ ಚೋಕ್ಸಿ ಮತ್ತು ಅವನ ನುರಿತ ವಕೀಲರ ತಂಡ, ಬೆಲ್ಜಿಯಂನಿಂದ ಭಾರತಕ್ಕೆ ಹಸ್ತಾಂತರ ಗೊಳ್ಳುವುದನ್ನು ತಡೆಯಲು ಕಾನೂನು ಮಾರ್ಗಗಳನ್ನು ಹುಡುಕುತ್ತಿದೆ. ಚೋಕ್ಸಿಗೆ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಇರುವುದರಿಂದ ತುರ್ತು ಚಿಕಿತ್ಸೆ ಅಗತ್ಯವಿದೆ. ಹಾಗಾಗಿ ಈಗ ಭಾರತಕ್ಕೆ ಹಸ್ತಾಂತರ ಮಾಡಬಾರದು. ಬೆಲ್ಜಿಯಂನಲ್ಲೇ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕು ಎಂಬ ಮನವಿಯನ್ನು ವಕೀಲರ ತಂಡ, ಬ್ರುಸೆಲ್ಸ್ ನ್ಯಾಯಾಲಯದಲ್ಲಿ ಸಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಂಧನ ತಡ ಆಗಿದ್ದೇಕೆ?
ಚೋಕ್ಸಿ ಬಂಧನಕ್ಕೆ ಬೆಲ್ಜಿಯಂ ನ್ಯಾಯಾಲಯ 2024ರ ನವೆಂಬರ್‌ನಲ್ಲೇ ಆದೇಶ ಹೊರಡಿಸಿದ್ದರೂ 5-6 ತಿಂಗಳು ತಡ ಏಕಾಯಿತು? ಎಂಬ ಪ್ರಶ್ನೆಗೆ ಸಿಬಿಐ ಅಧಿಕಾರಿಗಳು, ‘ಬಂಧನ ತಡವಾಗಿರ ಬಹುದು. ಆದರೆ, ನಾವು ಚೋಕ್ಸಿಯ ಮೇಲೆ ಸದಾ ನಿಗಾ ಇರಿಸಿದ್ದೆವು. ಆತ ಆಸ್ಪತ್ರೆಯಿಂದ ತಪ್ಪಿಸಿ ಕೊಳ್ಳಲು ಸಾಧ್ಯವೇ ಇರಲಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ಹಸ್ತಾಂತರ ಸರಾಗ ಆಗಲಿದೆಯೇ? ಎಂಬ ಇನ್ನೊಂದು ಪ್ರಶ್ನೆಗೆ, ‘ಚೋಕ್ಸಿ ಏನು ಬೆಲ್ಜಿಯಂ ಪ್ರಜೆ ಅಲ್ಲ. ಹಾಗಾಗಿ ಆತನನ್ನು ಭಾರತಕ್ಕೆ ಹಸ್ತಾಂ ತರಿಸುವ ಅವಕಾಶಗಳು ಹೆಚ್ಚೇ ಇವೆ’ ಎಂದು ಅಧಿಕಾರಿ ಉತ್ತರಿಸಿದ್ದಾರೆ.
ಯಾರು ಈ ಚೋಕ್ಸಿ?
1959ರಲ್ಲಿ ಭಾರತದಲ್ಲಿ ಜನಿಸಿದ ಮೆಹುಲ್ ಚೋಕ್ಸಿ, ಕಾಲೇಜು ವ್ಯಾಸಂಗದ ಬಳಿಕ ವಜ್ರದ ವ್ಯಾಪಾರಕ್ಕಿಳಿದ. ನಂತರದಲ್ಲಿ ‘ಗೀತಾಂಜಲಿ ಗ್ರೂಪ್’ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ವಜ್ರ- ಆಭರಣಗಳ ವ್ಯಾಪಾರ ಆರಂಭಿಸಿ ಹಲವು ವರ್ಷ ಗಳವರೆಗೂ ಮುಂದುವರಿ ಸಿದ. ಚೋಕ್ಸಿ, ಬಳಿಕ ಹಂತ ಹಂತವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ನಿಂದ ಸಾಲ ಪಡೆಯಲಾರಂಭಿಸಿದ. ವಿದೇಶದಲ್ಲೂ ವಹಿವಾಟು ವಿಸ್ತರಿಸುವ ನೆಪವೊಡ್ಡಿ 6059 ಕೋಟಿ ರು.ವರೆಗೂ ಸಾಲ ಪಡೆದ. ಜತೆಗೆ ಸೋದರಳಿಯ ನೀರವ್ ಮೋದಿಯನ್ನೂ ಜತೆಗಿಟ್ಟುಕೊಂಡು ಬ್ಯಾಂಕ್ ವಂಚನೆ ಮೊತ್ತವನ್ನು ಮತ್ತಷ್ಟು ಹಿಗ್ಗಿಸಿದ. 2011ರಿಂದ 2018ರ ನಡುವೆ ಇಬ್ಬರೂ ‘ಪಿಎನ್ ಬಿ’ಯಿಂದ ಚೋಕ್ಸಿ 6097 ಕೋಟಿ ರು. ಮತ್ತು ನೀರವ್ ಮೋದಿ 6498 ಕೋಟಿ ರು. ಸಾಲ ಪಡೆದಿದ್ದು, ಬಡ್ಡಿ ಸೇರಿ ಅದೀಗ 13850 ಕೋಟಿ ರು.ಗೆ ತಲುಪಿದೆ. 2018ರಲ್ಲಿ ದೇಶದಿಂದ ಓಡಿ ಹೋಗಿದ್ದ. ಮೊದಲಿಗೆ ಅಮೆರಿಕ, ಬಳಿಕ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದ. ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ (ಕ್ಯಾನ್ಸರ್) ತುತ್ತಾಗಿದ್ದರಿಂದ ಚಿಕಿತ್ಸೆಗಾಗಿ ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ.
ಇಂಟರ್‌ಪೋಲ್ ನೋಟಿಸ್ ರದ್ದು!
ಭಾರತ ಸರಕಾರದ ಕೋರಿಕೆ ಮೇರೆಗೆ ವಂಚಕ ಮೆಹುಲ್ ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದ ಇಂಟರ್‌ಪೋಲ್ ಪೊಲೀಸರು, ಆ ಬಳಿಕ 2022ರಲ್ಲಿ ನೋಟಿಸ್ ವಾಪಸ್ ತೆಗೆದುಕೊಂಡಿದ್ದರು. ಹಾಗಾಗಿಯೇ ವಂಚಕ ಚೋಕ್ಸಿಯ ಬಂಧನ ವಿದೇಶಿ ನೆಲದಲ್ಲಿ ಕಷ್ಟವಾಗಿತ್ತು.