Vishweshwar Bhat Column: ಜಪಾನಿನ ದೈನಿಕಗಳು
ಜಪಾನಿನ ಸುದ್ದಿಪತ್ರಿಕೆಗಳ ಪ್ರಸರಣ ಮಟ್ಟವು ದಿಗ್ಭ್ರಮೆಗೊಳಿಸುವಂತಿದೆ. ಪೂರ್ಣಗಾತ್ರದ ‘ಯುಎಸ್‌ಎ ಟುಡೇ’ ಮತ್ತು ಟ್ಯಾಬ್ಲಾಯ್ಡ್ ಟೈಮ್ಸ್ ದೈನಂದಿನ ಪ್ರಸರಣ ಎಂಟು ಲಕ್ಷ ಅಥವಾ ಹತ್ತು ಲಕ್ಷಕ್ಕಿಂತ ಹೆಚ್ಚು ಇದ್ದರೆ, ಜಪಾನಿನ ಜನಪ್ರಿಯ ‘ಯೊಮಿಯುರಿ ಶಿಂಬುನ್’ ದೈನಿಕವೊಂದೇ ಸುಮಾರು ಹತ್ತು ಮಿಲಿಯನ್ ಅಂದರೆ ಒಂದು ಕೋಟಿಯಷ್ಟಿದೆ.


ಸಂಪಾದಕರ ಸದ್ಯಶೋಧನೆ
ಪ್ರಪಂಚದಲ್ಲಿ ಯಾವ ದಿನಪತ್ರಿಕೆ ಅತಿ ಹೆಚ್ಚು ಪ್ರಸರಣವನ್ನು ಹೊಂದಿದೆ ಎಂದು ನೀವು ಯಾವುದೇ ಅಮೆರಿಕನ್ ಪ್ರಜೆಯನ್ನು ಕೇಳಿದರೆ, ‘ಯುಎಸ್‌ಎ ಟುಡೇ, ವಾಲ್ ಸ್ಟ್ರೀಟ್ ಜರ್ನಲ್ ಅಥವಾ ನ್ಯೂಯಾರ್ಕ್ ಟೈಮ್ಸ್’ ಎಂಬ ಉತ್ತರ ಬರಬಹುದು. ಇವು ಅತಿ ಹೆಚ್ಚು ಪ್ರಸರಣವನ್ನು ಹೊಂದಿರುವ ಅಮೆರಿಕದ 3 ಪತ್ರಿಕೆಗಳು. ಆದರೆ ಜಪಾನಿನ ದೈನಿಕಗಳ ಪ್ರಸಾರಕ್ಕೆ ಹೋಲಿಸಿದರೆ, ಅಮೆರಿಕದ ದೈನಿಕಗಳು ಹತ್ತಿರಕ್ಕೂ ಬರುವುದಿಲ್ಲ.
ನಿಜ, ಜಪಾನಿನ ಸುದ್ದಿಪತ್ರಿಕೆಗಳ ಪ್ರಸರಣ ಮಟ್ಟವು ದಿಗ್ಭ್ರಮೆಗೊಳಿಸುವಂತಿದೆ. ಪೂರ್ಣಗಾತ್ರದ ‘ಯುಎಸ್‌ಎ ಟುಡೇ’ ಮತ್ತು ಟ್ಯಾಬ್ಲಾಯ್ಡ್ ಟೈಮ್ಸ್ ದೈನಂದಿನ ಪ್ರಸರಣ ಎಂಟು ಲಕ್ಷ ಅಥವಾ ಹತ್ತು ಲಕ್ಷಕ್ಕಿಂತ ಹೆಚ್ಚು ಇದ್ದರೆ, ಜಪಾನಿನ ಜನಪ್ರಿಯ ‘ಯೊಮಿಯುರಿ ಶಿಂಬುನ್’ ದೈನಿಕವೊಂದೇ ಸುಮಾರು ಹತ್ತು ಮಿಲಿಯನ್ ಅಂದರೆ ಒಂದು ಕೋಟಿಯಷ್ಟಿದೆ.
‘ಯೊಮಿಯುರಿ ಶಿಂಬುನ್’ ಜಪಾನಿನ ಅತಿ ದೊಡ್ಡ ದಿನಪತ್ರಿಕೆಗಳಲ್ಲಿ ಒಂದು. ಇದು ಪ್ರತಿದಿನ 2 ಆವೃತ್ತಿಗಳನ್ನು ಪ್ರಕಟಿಸುತ್ತಿದ್ದು, ವಿವಿಧ ಪ್ರಾದೇಶಿಕ ಆವೃತ್ತಿಗಳೊಂದಿಗೆ ದೇಶಾದ್ಯಂತ ವ್ಯಾಪಿಸಿದೆ. ಇದು ಯೊಮಿಯುರಿ ಗ್ರೂಪ್‌ನ ಭಾಗವಾಗಿದ್ದು, ಆ ದೇಶದ ಅತಿ ದೊಡ್ಡ ಮಾಧ್ಯಮ ಸಮೂಹ ಗಳಲ್ಲಿ ಒಂದಾಗಿದೆ. ‘ಅಸಾಹಿ ಶಿಂಬುನ್’ ಎಂಬ ಇನ್ನೊಂದು ಪ್ರಮುಖ ದೈನಿಕ ಸುಮಾರು 80 ಲಕ್ಷಕ್ಕಿಂತ ಹೆಚ್ಚು ಪ್ರಸಾರವನ್ನು ಹೊಂದಿದೆ.
ಇದನ್ನೂ ಓದಿ: Vishweshwar Bhat Column: ಬದುಕು ಡೈರಿಯಲ್ಲಿ ದಾಖಲಿಸದಷ್ಟು ಡಲ್ ಆಗಿರಲು ಸಾಧ್ಯವಿಲ್ಲ !
ಇದು 2ನೇ ಅತಿ ದೊಡ್ಡ ದಿನಪತ್ರಿಕೆ. ಇದು ತನ್ನ ಪ್ರಗತಿಪರ ನಿಲುವು, ರಾಜಕೀಯ ಭ್ರಷ್ಟಾಚಾರದ ವಿರುದ್ಧದ ವರದಿ ಮತ್ತು ಸಾಮಾಜಿಕ ನ್ಯಾಯದ ಪರವಾದ ಲೇಖನಗಳಿಗಾಗಿ ಪ್ರಸಿದ್ಧವಾಗಿದೆ. ಮತ್ತೊಂದು ಪ್ರಮುಖ ದೈನಿಕ ‘ಮೈನಿಚಿ ಶಿಂಬುನ್’ 40 ಲಕ್ಷಕ್ಕೂ ಅಧಿಕ ಪ್ರಸಾರವನ್ನು ಹೊಂದಿವೆ. ಇದೂ ಜಪಾನಿನ ಪ್ರಮುಖ ದಿನಪತ್ರಿಕೆಗಳಲ್ಲಿ ಒಂದು. 1872ರಲ್ಲಿ ಸ್ಥಾಪಿತವಾದ ‘ಟೋಕಿಯೋ ನಿಚಿ ಶಿಂಬುನ್’ ಮತ್ತು 1876ರಲ್ಲಿ ಸ್ಥಾಪಿತವಾದ ‘ಓಸಾಕಾ ಮೈನಿಚಿ ಶಿಂಬುನ್’ ಎಂಬ 2 ಪತ್ರಿಕೆಗಳ ಸಂಯೋಜನೆಯಿಂದ 1911ರಲ್ಲಿ ‘ಮೈನಿಚಿ ಶಿಂಬುನ್’ ಆಗಿ ರೂಪುಗೊಂಡಿತು. ಈ ಮೂರೂ ದೈನಿಕ ಗಳು ಮತ್ತು ಇದರ ಜತೆಯಲ್ಲಿ ಇನ್ನೆರಡು ದೈನಿಕಗಳಾದ ‘ಸ್ಯಾಂಕಿ ಶಿಂಬುನ್ ಮತ್ತು ನಿಹೋನ್ ಕೀಜೈ ಶಿಂಬುನ್’ಗಳ ಪ್ರಸಾರವನ್ನು ಸೇರಿಸಿದರೆ, ಎರಡು ಕೋಟಿ ಅರವತ್ತು ಲಕ್ಷ ಪ್ರತಿಗಳನ್ನು ದಾಟುತ್ತವೆ.
ಬಹುಶಃ ಜಪಾನಿನ ಪ್ರಮುಖ ದಿನಪತ್ರಿಕೆಗಳ ಬೃಹತ್ ಮಾರಾಟಕ್ಕೆ ಪ್ರಾಥಮಿಕ ಕಾರಣವೆಂದರೆ ದೇಶದ ಭೂಗಾತ್ರ ಮತ್ತು ಜನಸಂಖ್ಯಾ ಸಾಂದ್ರತೆ. ಈ ದೈನಿಕಗಳ ಜತೆಗೆ, ಚುನಿಚಿ ಶಿಂಬುನ್, ಟೋಕಿ ಯೋ ಶಿಂಬುನ್, ನಿಶಿನಿಪ್ರೋನ್ ಶಿಂಬುನ್, ಹೋಕೈಡೋ ಶಿಂಬುನ್, ಒಕಿನಾವಾ ಟೈಮ್ಸ್ ಕೂಡ ಗಣನೀಯ ಪ್ರಸಾರ ಮತ್ತು ಪ್ರಭಾವವನ್ನು ಹೊಂದಿವೆ.
‘ಚುನಿಚಿ ಶಿಂಬುನ್’ ಜಪಾನಿನ ಪ್ರಮುಖ ಪ್ರಾದೇಶಿಕ ದಿನಪತ್ರಿಕೆಗಳಲ್ಲಿ ಒಂದು. ಇದು ಆಯಿಚಿ ಪ್ರದೇಶದಲ್ಲಿ ಹೆಚ್ಚು ಪ್ರಸಿದ್ಧವಾಗಿದ್ದು, ಶೇ.60 ಜನ ಈ ಪತ್ರಿಕೆಯನ್ನು ಓದುತ್ತಾರೆ. ಈ ಪತ್ರಿಕೆಯು ಪ್ರಗತಿಪರ ನಿಲುವು ಹೊಂದಿದ್ದು, ಸಾಮಾಜಿಕ ನ್ಯಾಯ ಮತ್ತು ಪರಿಸರ ಸಂರಕ್ಷಣೆಯ ವಿಷಯ ಗಳಲ್ಲಿ ಹೆಚ್ಚು ಗಮನ ಹರಿಸುತ್ತದೆ.
ಟೋಕಿಯೋ ಶಿಂಬುನ್, ಚುಬು-ನಿಪ್ಪೊನ್ ಶಿಂಬುನ್ ಕಂಪನಿಯ ಅಂಗಸಂಸ್ಥೆಯಾಗಿದ್ದು, ಟೋಕಿ ಯೋ ಪ್ರದೇಶದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ನಿಶಿನಿಪ್ರೋನ್ ಶಿಂಬುನ್, ಕ್ಯೂಶು ಪ್ರದೇಶದಲ್ಲಿ ಪ್ರಮುಖ ದಿನಪತ್ರಿಕೆ. ಹೋಕೈಡೋ ಶಿಂಬುನ್, ಹೊಕೈಡೋ ಪ್ರದೇಶದಲ್ಲಿ ಪ್ರಮುಖ ದಿನಪತ್ರಿಕೆ. ಇದು ಪ್ರಾದೇಶಿಕ ಸುದ್ದಿಗಳು, ಕೃಷಿ ಮತ್ತು ಪರಿಸರ ಸಂರಕ್ಷಣೆಯ ವಿಷಯಗಳಲ್ಲಿ ಹೆಚ್ಚು ಗಮನ ಹರಿಸುತ್ತದೆ. ಒಕಿನಾವಾ ಟೈಮ್ಸ್, ಒಕಿನಾವಾ ಪ್ರದೇಶದಲ್ಲಿ ಪ್ರಮುಖ ದಿನಪತ್ರಿಕೆ. ಅಮೆರಿಕ ಮತ್ತು ಜಪಾನ್ ಅತಿ ಹೆಚ್ಚು ಸಾಕ್ಷರರನ್ನು ಹೊಂದಿವೆ.
ಈ ಎರಡೂ ದೇಶಗಳಲ್ಲಿ ದೈನಿಕಗಳು ಟಿವಿಗಳಿಂದ ಸಮಪ್ರಮಾಣದ ಪೈಪೋಟಿಯನ್ನು ಎದುರಿಸು ತ್ತಿವೆ. ಆದರೆ ಜಪಾನಿನ ಪತ್ರಿಕಾ ಓದುಗರು ಸುಮಾರು ಮೂರು ಮುಕ್ಕಾಲು ಲಕ್ಷ ಚದರ ಕಿಮೀಗೆ ಸೀಮಿತವಾಗಿದ್ದರೆ, ಅಮೆರಿಕದ ಓದುಗರು ಅದಕ್ಕಿಂತ 25 ಪಟ್ಟು ಹೆಚ್ಚಿನ ಭೂಭಾಗಗಳಲ್ಲಿ ಹಂಚಿ ಹೋಗಿzರೆ. ಜಪಾನಿನಲ್ಲಿ ಪತ್ರಿಕೆಗಳ ಪ್ರಸಾರವನ್ನು ಹೆಚ್ಚಿಸುವುದು ಸುಲಭ. ಆದರೆ ಅಮೆರಿಕದಂಥ ವಿಶಾಲ ದೇಶದಲ್ಲಿ ಅದೊಂದು ಸವಾಲು. ಆದರೆ ಜಪಾನಿನ ಪತ್ರಿಕೆಗಳಿಗಿಂತ ಅಮೆರಿಕದ ಪತ್ರಿಕೆಗಳ ಪುಟಗಳ ಸಂಖ್ಯೆ ಹೆಚ್ಚು.