Bengaluru Rain: 2ನೇ ದಿನವೂ ಮಳೆಗೆ ಮುಳುಗಿದ ಬೆಂಗಳೂರು, ರಸ್ತೆಗಳೆಲ್ಲಾ ಕೆರೆ
ನಗರದ ರಸ್ತೆಗಳ ಮೇಲೆ ಭಾರೀ ಪ್ರಮಾಣದ ಮಳೆ ನೀರು ನಿಂತುಕೊಂಡಿದ್ದು, ಕೆರೆಗಳಂತಾಗಿವೆ. ಮಳೆ ನಿಂತಿಲ್ಲ ಹಾಗೂ ರಸ್ತೆಗಳ ಮೇಲಿನ ನೀರು ಮಾತ್ರ ಕಡಿಮೆಯಾಗುತ್ತಿಲ್ಲ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದು, ಎಲ್ಲೆಡೆ ಟ್ರಾಫಿಕ್ ಜಾಮ್ ಆಗಿದೆ.


ಬೆಂಗಳೂರು: ನಾಡಿನಾದ್ಯಂತ ಮುಂಗಾರುಪೂರ್ವ ಮಳೆಯಾಗುತ್ತಿದೆ. ಧಗೆಗೆ ಬಾಯಾರಿದ ಪ್ರದೇಶಗಳಲ್ಲಿ ಈ ಮಳೆ ಹರ್ಷ ತಂದಿದ್ದರೆ, ಬೆಂಗಳೂರಿನಲ್ಲಿ (Bengaluru rain news) ಮಾತ್ರ ಅನಾಹುತವನ್ನೇ ಸೃಷ್ಟಿಸಿದೆ. ಸೋಮವಾರ ಇಡೀ ರಾತ್ರಿ ಕೂಡ ಭಾರಿ ಮಳೆಯಾಗಿದ್ದು, ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಬೆಂಗಳೂರು ಪೂರ್ತಿ ಮುಳುಗಿದೆ. ಎಲ್ಲ ರಸ್ತೆಗಳೂ ಜಲಾವೃತವಾಗಿವೆ. ಸೋಮವಾರ ಮುಂಜಾನೆ ಆಫೀಸಿಗೆ ತೆರಳುವ ಯೋಚನೆಯನ್ನೇ ಜನ ಕೈಬಿಟ್ಟರು. ಈಗಾಗಲೇ ಮಳೆ ಮೂವರನ್ನು ಬಲಿ ಪಡೆದುಕೊಂಡಿದೆ.
ನಿನ್ನೆ ಬೆಳಗ್ಗೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಮಳೆಯಿಂದ ಮತ್ತಿಬ್ಬರು ಸಾವನ್ನಪ್ಪಿರುವಂತಹ ಘಟನೆ ಬಿಟಿಎಂ ಲೇಔಟ್ನ 2ನೇ ಹಂತದ ಎನ್.ಎಸ್.ಪಾಳ್ಯದಲ್ಲಿ ನಡೆದಿದೆ. ಮಧುವನ ಅಪಾರ್ಟ್ಮೆಂಟ್ನ ನಿವಾಸಿ 55 ವರ್ಷದ ಮನೋಹರ ಕಾಮತ್ ಮತ್ತು ನೇಪಾಳ ಮೂಲದ 9 ವರ್ಷದ ಬಾಲಕ ದಿನೇಶ್ ಮೃತರು. ಮಳೆಯಿಂದ ಮಧುವನ ಅಪಾರ್ಟ್ಮೆಂಟ್ನ ಬೇಸ್ಮೆಂಟ್ ಜಲಾವೃತವಾಗಿತ್ತು. ಮೋಟಾರ್ ಮೂಲಕ ನೀರು ಹೊರಹಾಕಲು ಯತ್ನಿಸುತ್ತಿದ್ದಾಗ ಎಲೆಕ್ಟ್ರಿಕ್ ಶಾಕ್ನಿಂದ ಮನೋಹರ ಕಾಮತ್ ಮತ್ತು ದಿನೇಶ್ ದುರ್ಮರಣ ಹೊಂದಿದ್ದಾರೆ.
ನಗರದ ರಸ್ತೆಗಳ ಮೇಲೆ ಭಾರೀ ಪ್ರಮಾಣದ ಮಳೆ ನೀರು ನಿಂತುಕೊಂಡಿದ್ದು, ಕೆರೆಗಳಂತಾಗಿವೆ. ಮಳೆ ನಿಂತಿಲ್ಲ ಹಾಗೂ ರಸ್ತೆಗಳ ಮೇಲಿನ ನೀರು ಮಾತ್ರ ಕಡಿಮೆಯಾಗುತ್ತಿಲ್ಲ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದು, ಎಲ್ಲೆಡೆ ಟ್ರಾಫಿಕ್ ಜಾಮ್ ಆಗಿದೆ. ಅದರಲ್ಲೂ ಹೊಸೂರು ರಸ್ತೆ, ತುಮಕೂರು ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮುಂದೆ ಸಾಗಲಾದೆ ಹೆದ್ದಾರಿಯಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ. ಇದರಲ್ಲಿ ಅಂಬ್ಯುಲೆನ್ಸ್ ಸಿಲುಕಿಕೊಂಡು ಪರದಾಡಿದೆ.
ಮೆಜೆಸ್ಟಿಕ್, ಕೆ ಆರ್ ಮಾರುಕಟ್ಟೆ, ಜಯನಗರ, ವಿಜಯನಗರ, ಚಂದ್ರಲೇಔಟ್, ರಾಜಾಜಿನಗರ, ಆರ್ ಟಿ ನಗರ, ಹೆಬ್ಬಾಳ, ಕೋರಮಂಗಲ, ಕಾಮಾಕ್ಷಿ ಪಾಳ್ಯ, ಆರ್ ಆರ್ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ರಾತ್ರಿ ಸುರಿದ ಮಳೆ, ರಾಜಧಾನಿ ಜನರ ನಿದ್ದೆ ಹಾಳು ಮಾಡಿದೆ. ನಾಗವಾರದ ಧಣಿಸಂಧ್ರದ ನಂದಗೋಕುಲ ಬಡಾವಣೆಯಲ್ಲಿ ಮಹಾ ಮಳೆಗೆ ತತ್ತರಿಸಿ ಹೋಗಿರುವ ದೃಶ್ಯಗಳು ಕಂಡುಬಂದಿವೆ. ಮಳೆಯಿಂದಾಗಿ ಬಡಾವಣೆ ನಿವಾಸಿಗಳು ಪರದಾಡುತ್ತಿದ್ದಾರೆ. ರಾಜಕಾಲುವೆ ತುಂಬಿ ಹರಿದು ಬಡಾವಣೆಗೆ ನುಗ್ಗಿದೆ. ಬಡಾವಣೆ ಜನರು ಕೆಲಸ ಕಾರ್ಯಗಳಿಗೆ ಹೋಗದೆ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಮನೆಯೊಳಗೆ ಸುಮಾರು 4-5 ಅಡಿ ನೀರು ನಿಂತಿದೆ. ಈ ಪರಿಸ್ಥಿತಿ ಕಂಡು ಪಾಲಿಕೆ ಅಧಿಕಾರಿಗಳು ಮತ್ತು ಶಾಸಕರ ನಿರ್ಲಕ್ಷ್ಯಕ್ಕೆ ನಂದಗೋಕುಲ ನಿವಾಸಿಗಳು ಕಿಡಿಕಾರಿದ್ದಾರೆ.
ಕೋರಮಂಗಲ ಹೈಪೈ ಸಿಟಿ ಭಾರೀ ಮಳೆಗೆ ಕೆರೆಯಂತಾಗಿದೆ. ಸುಮಾರು ಮೂರು ಅಡಿ ನೀರು ನಿಂತು ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳೆಲ್ಲ ಜಲಾವೃತವಾಗಿದ್ದು, ಕೋರಮಂಗಲ ನಾಲ್ಕನೇ ಬ್ಲಾಕ್ ಸಂಪೂರ್ಣ ಜಲಮಯವಾಗಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನಿಂತ ನೀರಲ್ಲೇ ಜನರು ಕೆಲಸ ಕಾರ್ಯಗಳಿಗೆ ಹೊರಡಲು ತೆರಳಿದ್ದಾರೆ. ಮನೆಗಳಿಂದ ಹೊರ ಬರಲು ಕೂಡ ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.