ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Bengaluru Rain: ಬೆಂಗಳೂರಿನಲ್ಲಿ ಮಳೆ ಅನಾಹುತ, ಈ ಮಾರ್ಗಗಳನ್ನು ಬಳಸದಿರಲು ಟ್ರಾಫಿಕ್‌ ಅಲರ್ಟ್

Bengaluru Rain News: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಹಲವು ರಸ್ತೆಗಳಲ್ಲಿ ನಿಧಾನಗತಿಯ ಸಂಚಾರ ಇದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಳೆ ಅನಾಹುತ, ಈ ಮಾರ್ಗಗಳನ್ನು ಬಳಸದಿರಲು ಟ್ರಾಫಿಕ್‌ ಅಲರ್ಟ್

ಹರೀಶ್‌ ಕೇರ ಹರೀಶ್‌ ಕೇರ May 20, 2025 8:30 AM

ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಮಳೆಯ (Bengaluru Rain news) ಅಬ್ಬರ ಮುಂದುವರಿದಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆಯ ಮೇಲೆ ವಾಹನ ಕೊಂಡೊಯ್ಯುವುದು ಅಸಾಧ್ಯವಾಗಿದೆ. ಮೆಜೆಸ್ಟಿಕ್, ಕೆ.ಆರ್​.ಮಾರ್ಕೆಟ್, ಜಯನಗರ, ಚಾಮರಾಜಪೇಟೆ, ಬನಶಂಕರಿ, ಶಾಂತಿನಗರ, ವಿಜಯನಗರ, ಚಂದ್ರಾಲೇಔಟ್, ರಾಜಾಜಿನಗರ, ಆರ್.ಟಿ.ನಗರ, ಹೆಬ್ಬಾಳ, ಮಲ್ಲೇಶ್ವರಂ, ಕೋರಮಂಗಲ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಯಶವಂತಪುರ, ಪೀಣ್ಯ, ಬಿಟಿಎಂ ಲೇಔಟ್ ಸೇರಿ ಹಲವೆಡೆ ರಾತ್ರಿಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದೆ. ಕೆಲವು ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗೆ ಮಳೆ ಜೋರಾಗಿದೆ. ಪರಿಣಾಮವಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಕೆಲವು ರಸ್ತೆಗಳನ್ನು ಬಳಸದಿರಲು ಟ್ರಾಫಿಕ್‌ ಪೊಲೀಸರು ಸೂಚನೆ (Traffic alert) ನೀಡಿದ್ದಾರೆ.

ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಹಲವು ರಸ್ತೆಗಳಲ್ಲಿ ನಿಧಾನಗತಿಯ ಸಂಚಾರ ಇದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಪುಟ್ಟೇನಹಳ್ಳಿ ಮುಖ್ಯರಸ್ತೆ ಕಡೆಯಿಂದ ಕೊತ್ತನೂರು ದಿನ್ನೆ ಜಂಕ್ಷನ್ ಕಡೆಗೆ ಹಾಗೂ ಹೊಸಗುಡ್ಡದಹಳ್ಳಿ ಜಂಕ್ಷನ್ ಕಡೆಯಿಂದ ಮೈಸೂರು ರಸ್ತೆ ಟೋಲ್ಗೇಟ್ ಕಡೆಗೆ. ಮಳೆನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಳೆ ಬೀಳುತ್ತಿರುವುದರಿಂದ ರೂಪೇನ ಅಗ್ರಹಾರದ ಬಳಿ ರಸ್ತೆ ಜಲಾವೃತಗೊಂಡಿದ್ದು ಹೊಸೂರು ಮುಖ್ಯ ರಸ್ತೆ ಮೂಲಕ ನಗರದ ಒಳ ಭಾಗಕ್ಕೆ ಬರುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ವಾಹನ ಸವಾರರು ಬದಲಿ ರಸ್ತೆಗಳನ್ನು ಬಳಸಿ ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಬೆಂಗಳೂರಿನ ಯಾವೆಲ್ಲ ರಸ್ತೆಗಳು ಜಲಾವೃತ?

ಜಯದೇವ ಆಸ್ಪತ್ರೆ ಕಡೆಯಿಂದ ಈಸ್ಟ್ ಎಂಡ್ ಸರ್ಕಲ್ ಕಡೆಗೆ.

ವರ್ತೂರು ಕಾಲೇಜು ಕಡೆಯಿಂದ ವರ್ತೂರು ಕೋಡಿ ಕಡೆಗೆ.

ಕಾಟನ್‌ಪೇಟ್ ಕಡೆಯಿಂದ ಸುಲ್ತಾನ್‌ಪೇಟೆ ವೃತ್ತದ ಕಡೆಗೆ.

ಬಿಳೇಕಹಳ್ಳಿ ಕಡೆಯಿಂದ ಜಿ ಡಿ ಮರ ಕಡೆಗೆ.

ಸಾರಕ್ಕಿ ಜಂಕ್ಷನ್ ಕಡೆಯಿಂದ ಸಿಂಧೂರ ಜಂಕ್ಷನ್ ಕಡೆಗೆ.



ಮಡಿವಾಳ ಅಯ್ಯಪ್ಪ ಅಂಡರ್ ಪಾಸ್ ಬಳಸದಿರಿ

ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ಅಂಡರ್ ಪಾಸ್​​ನಲ್ಲಿ ನೀರು ತುಂಬಿಕೊಂಡಿದ್ದು, ಹೊಸೂರು ಮುಖ್ಯರಸ್ತೆಯಲ್ಲಿ ನಗರದಿಂದ ಹೊರಭಾಗಕ್ಕೆ ಹೋಗುವ ಮತ್ತು ನಗರದ ಒಳಭಾಗಕ್ಕೆ ಬರುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ವಾಹನ ಸವಾರರು ಬದಲಿ ರಸ್ತೆ ಬಳಸುವುದು ಒಳಿತು ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಹೊಸೂರು ಮುಖ್ಯರಸ್ತೆ, ರಿಂಗ್​ ರೋಡ್ ಜಲಾವೃತ

ಹೊಸೂರು ಮುಖ್ಯರಸ್ತೆ ಮತ್ತು ಹೊರ ವರ್ತುಲ ರಸ್ತೆ ಜಲಾವೃತಗೊಂಡಿದ್ದು, ಪರ್ಯಾಯ ಮಾರ್ಗಗಳ ಬಳಕೆಗೆ ಪೊಲೀಸರು ಸಲಹೆ ನೀಡಿದ್ದಾರೆ. ಬನಶಂಕರಿ ಕಡೆಯಿಂದ ಬರುವ ವಾಹನಗಳನ್ನು ಈಸ್ಟ್ ಎಂಡ್ ಸರ್ಕಲ್ ಬಳಿ ಎಡ ತಿರುವು ಮಾಡಿಸಿ ಸಾಗರ್ ಜಂಕ್ಷನ್ ಗೆ ಬಂದು ಬಲ ತಿರುವು ಮಾಡಿಸಿ ಬನ್ನೇರಘಟ್ಟ ರಸ್ತೆ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ.

ಮುಂದೆ ಬಂದ ವಾಹನಗಳನ್ನು ಜಯದೇವ ಜಂಕ್ಷನ್‌ನಲ್ಲಿ ಎಡ ತಿರುವು ಮಾಡಿಸಿ ಬನ್ನೇರುಘಟ್ಟ ಮುಖ್ಯರಸ್ತೆ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ. ಬಿ.ಟಿ.ಎಂ ಲೇಔಟ್ ಒಳಭಾಗದಿಂದ ಬರುವ ವಾಹನಗಳನ್ನು 16ನೇ ಮುಖ್ಯರಸ್ತೆಯಲ್ಲಿ ಎಡ ತಿರುವು ಮಾಡಿಸಿ ತಾವರೆಕೆರೆ ಮುಖ್ಯರಸ್ತೆ ಮೂಲಕ ಡಾ. ಮರಿಗೌಡ ರಸ್ತೆ, ಡೈರಿ ಸರ್ಕಲ್ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru Rain: 2ನೇ ದಿನವೂ ಮಳೆಗೆ ಮುಳುಗಿದ ಬೆಂಗಳೂರು, ರಸ್ತೆಗಳೆಲ್ಲಾ ಕೆರೆ