Operation Sindoor: ಕದನ ವಿರಾಮಕ್ಕೆ ಯಾರು ಕರೆ ನೀಡಿದರೆಂಬುದು ಸ್ಪಷ್ಟವಾಗಿದೆ; ಜೈಶಂಕರ್
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಆಪರೇಷನ್ ಸಿಂಧೂರ್ ಮತ್ತು ಪಾಕಿಸ್ತಾನದೊಂದಿಗಿನ ಕದನ ವಿರಾಮದ ಬಗ್ಗೆ ಮಾತನಾಡಿದ್ದಾರೆ. ಕದನ ವಿರಾಮಕ್ಕೆ ಯಾರು ಕರೆ ನೀಡಿದ್ದು ಸ್ಪಷ್ಟವಾಗಿದೆ ಎಂದು ಹೇಳಿದರು. “ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ವಿಶ್ವಾಸಾರ್ಹವಾಗಿ ಮತ್ತು ಶಾಶ್ವತವಾಗಿ ನಿಲ್ಲಿಸದವರೆಗೆ ಇಂಡಸ್ ಜಲ ಒಪ್ಪಂದವನ್ನು ತಡೆಹಿಡಿಯಲಾಗಿದೆ ಮತ್ತು ತಡೆಹಿಡಿಯಲಾಗುವುದು” ಎಂದು ತಿಳಿಸಿದರು.

ಎಸ್. ಜೈಶಂಕರ್

ನವದೆಹಲಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ (Foreign minister S Jaishankar) ಅವರು ಆಪರೇಷನ್ ಸಿಂಧೂರ್ (Operation Sindoor) ಮತ್ತು ಪಾಕಿಸ್ತಾನದೊಂದಿಗಿನ ಕದನ ವಿರಾಮದ (Ceasefire) ಬಗ್ಗೆ ಮಾತನಾಡಿದ್ದಾರೆ. ಕದನ ವಿರಾಮಕ್ಕೆ ಯಾರು ಕರೆ ನೀಡಿದ್ದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. “ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ವಿಶ್ವಾಸಾರ್ಹವಾಗಿ ಮತ್ತು ಶಾಶ್ವತವಾಗಿ ನಿಲ್ಲಿಸದವರೆಗೆ ಇಂಡಸ್ ಜಲ ಒಪ್ಪಂದವನ್ನು ತಡೆಹಿಡಿಯಲಾಗಿದೆ ಮತ್ತು ತಡೆಹಿಡಿಯಲಾಗುವುದು” ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಕೃಷಿ ಮತ್ತು ಕುಡಿಯುವ ನೀರಿಗಾಗಿ ಸಿಂದೂ ನದಿಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಪಾಕಿಸ್ತಾನವು, ಈ ವಿಷಯವನ್ನು ಪುನರ್‌ಪರಿಶೀಲಿಸುವಂತೆ ಕೋರಿಕೊಂಡು ಭಾರತದ ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, ಮೇ 7ರಂದು ಭಯೋತ್ಪಾದಕ ತಾಣಗಳ ಮೇಲೆ ನಡೆಸಿದ ನಿಖರ ದಾಳಿಗಳು ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಕೇವಲ ಭಯೋತ್ಪಾದಕರನ್ನು ಟಾರ್ಗೆಟ್ ಮಾಡಲಾಗಿತ್ತು. ಪಾಕಿಸ್ತಾನದ ಸೇನೆಯನ್ನಲ್ಲ ಎಂದು ಸ್ಪಷ್ಟಪಡಿಸಿದರು. “ನಾವು ಪಾಕಿಸ್ತಾನದ ಸೇನೆಯ ಮೇಲೆ ದಾಳಿ ಮಾಡಿರಲಿಲ್ಲ. ಆದ್ದರಿಂದ ಸೇನೆಗೆ ಹಿಂದೆ ಸರಿಯುವ ಮತ್ತು ಹಸ್ತಕ್ಷೇಪ ಮಾಡದಿರುವ ಆಯ್ಕೆ ಇತ್ತು. ಆದರೆ ಅವರು ಒಳ್ಳೆಯ ಸಲಹೆಯನ್ನು ತೆಗೆದುಕೊಳ್ಳಲಿಲ್ಲ” ಎಂದು ಜೈಶಂಕರ್ ಹೇಳಿದರು.
“ಸ್ಯಾಟಲೈಟ್ ಚಿತ್ರಗಳು ನಾವು ಎಷ್ಟು ಹಾನಿಯನ್ನುಂಟು ಮಾಡಿದ್ದೇವೆ ಮತ್ತು ಅವರು ಎಷ್ಟು ಕಡಿಮೆ ಹಾನಿ ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿವೆ. ಮೇ 7ರಂದು ಹಿಂದೆ ಸರಿಯಲು ಒಪ್ಪದವರು, ಮೇ 10 ರಂದು ಹಿಂದೆ ಸರಿಯಲು ಮತ್ತು ಮಾತುಕತೆಗೆ ಒಪ್ಪಿದರು. ಆದ್ದರಿಂದ ಯುದ್ಧ ವಿರಾಮಕ್ಕೆ ಯಾರು ಕರೆ ನೀಡಿದ್ದು ಸ್ಪಷ್ಟವಾಗಿದೆ” ಎಂದು ಅವರು ತಿಳಿಸಿದರು.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ವಿರಾಮವನ್ನು ವಾಣಿಜ್ಯ ಒಪ್ಪಂದದ ಭರವಸೆಯೊಂದಿಗೆ ಸಾಧಿಸಲಾಯಿತು ಎಂದು ಹೇಳಿಕೊಂಡಿದ್ದನ್ನು ಉಲ್ಲೇಖಿಸದೆ, ಜೈಶಂಕರ್, “ಭಾರತ ಮತ್ತು ಅಮೆರಿಕದ ನಡುವೆ ವಾಣಿಜ್ಯ ಮಾತುಕತೆಗಳು ನಡೆಯುತ್ತಿವೆ. ಇವು ಸಂಕೀರ್ಣವಾದ ಮಾತುಕತೆಗಳಾಗಿವೆ. ಯಾವುದೇ ವಾಣಿಜ್ಯ ಒಪ್ಪಂದವು ಎರಡೂ ದೇಶಗಳಿಗೆ ಪರಸ್ಪರ ಲಾಭದಾಯಕವಾಗಿರಬೇಕು. ಇದು ನಮ್ಮ ನಿರೀಕ್ಷೆಯಾಗಿದೆ” ಎಂದು ಹೇಳಿದರು.
ಭಾರತದ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಮತ್ತು ವ್ಯವಹಾರಗಳು ಕಟ್ಟುನಿಟ್ಟಾಗಿ ದ್ವಿಪಕ್ಷೀಯವಾಗಿರುತ್ತವೆ ಎಂದು ಸಚಿವರು ಒತ್ತಿ ಹೇಳಿದರು. ಇದು ಹಲವು ವರ್ಷಗಳಿಂದ ರಾಷ್ಟ್ರೀಯ ಒಮ್ಮತವಾಗಿದ್ದು, ಈ ಒಮ್ಮತದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಮೇ 10ರಂದು ಭಾರತದ ವಿದೇಶಾಂಗ ಸಚಿವಾಲಯವು ಕದನವಿರಾಮವನ್ನು ಘೋಷಿಸುವ ಕೆಲವೇ ನಿಮಿಷಗಳ ಮೊದಲು ಟ್ರಂಪ್, ಯುದ್ಧವಿರಾಮದ ಘೋಷಣೆ ಮಾಡಿದ್ದರು. ಮೂರು ದಿನಗಳ ನಂತರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಪರೇಷನ್ ಸಿಂಧೂರ್ ಕುರಿತು ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಕೆಲವೇ ನಿಮಿಷಗಳ ಮೊದಲು, ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನಕ್ಕೆ ತಮ್ಮ ಆಡಳಿತವು ಸಂಘರ್ಷವನ್ನು ಕೊನೆಗೊಳಿಸಿದರೆ ಮಾತ್ರ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾಗಿ ತಿಳಿಸಿದರು.
ಕಾಶ್ಮೀರ ಸೇರಿದಂತೆ ಪಾಕಿಸ್ತಾನದೊಂದಿಗಿನ ವಿವಾದಾತ್ಮಕ ವಿಷಯಗಳಿಗೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಭಾರತ ಯಾವಾಗಲೂ ತಿರಸ್ಕರಿಸುತ್ತದೆ. ಟ್ರಂಪ್‌ನ ಘೋಷಣೆಯು ಭಾರೀ ವಿವಾದಕ್ಕೆ ಕಾರಣವಾಯಿತು. ಕಾಂಗ್ರೆಸ್ ಪಕ್ಷವು ಅಮೆರಿಕದ ಹೇಳಿಕೆಗಳು ಸರಿಯೇ ಎಂದು ಪ್ರಶ್ನಿಸಿತು ಮತ್ತು ಆಪರೇಷನ್ ಸಿಂಧೂರ್ ಮತ್ತು ಇತರ ಸಂಬಂಧಿತ ವಿಷಯಗಳನ್ನು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಕೋರಿತು. ಟ್ರಂಪ್‌ನ ಹೆಸರನ್ನು ಉಲ್ಲೇಖಿಸದೆ, ಸರ್ಕಾರವು ಕದವಿರಾಮದ ಪ್ರಸ್ತಾಪಗಳು ಪಾಕಿಸ್ತಾನದಿಂದ ಬಂದಿವೆ ಎಂದು ಸ್ಥಿರವಾಗಿ ಹೇಳಿಕೊಂಡಿದೆ.