ಸೋನು ನಿಗಮ್ ಜತೆ ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿರುವ ಪರಭಾಷಾ ಗಾಯಕರು ಇವರು
ಕಲೆಗೆ ಭಾಷೆಯ ಹಂಗಿಲ್ಲ. ಚಿತ್ರರಂಗದ ಮಟ್ಟಿಗಂತೂ ಇದು ಶೇ. 100ರಷ್ಟು ನಿಜ. ದೇಶದಲ್ಲಿನ ಹತ್ತಾರು ಭಾಷೆಯ ಚಿತ್ರರಂಗದ ಕಲಾವಿದರು ಎಲ್ಲ ಕಡೆಯೂ ಸಲ್ಲುತ್ತಾರೆ. ಈ ಮಾತು ಕಲಾವಿದರಿಗೆ ಮಾತ್ರ ಅನ್ವಯಿಸುವುದಿಲ್ಲ. ತಂತ್ರಜ್ಞರಿಂದ ಹಿಡಿದು ಗಾಯಕರು ಕೂಡ ಬೇರೆ ಬೇರೆ ಭಾಷೆಗಳಲ್ಲಿ ತೊಡಗಿಸಿಕೊಂಡು ಜನಪ್ರಿಯತೆ ಪಡೆಯುತ್ತಾರೆ. ಸ್ಯಾಂಡಲ್ವುಡ್ನಲ್ಲಿ ಹಿಂದಿನಿಂದಲೂ ಪರಭಾಷಿಕರು ಮಿಂಚಿರುವ ಉದಾಹರಣೆ ಇದೆ. ಘಂಟಸಾಲ, ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮನು, ಕೆ.ಜೆ.ಯೇಸುದಾಸ್, ಸೋನು ನಿಗಮ್, ಉದಿತ್ ನಾರಾಯಣ್, ಕೆಕೆ, ಶಾನ್, ಕೈಲಾಸ್ ಖೇರ್...ಹೀಗೆ ಸ್ಯಾಂಡಲ್ವುಡ್ನಲ್ಲಿ ಮಿಂಚಿದ ಪರಭಾಷೆಯ ಗಾಯಕರ ಲಿಸ್ಟ್ ದೊಡ್ಡದಿದೆ. ಹೊರಗಿನವರಾದರೂ ಇವರು ಕನ್ನಡದವರೇ ಆಗಿದ್ದಾರೆ. ಇದೀಗ ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿರುವ ಟಾಪ್ ಗಾಯಕರ ಕಿರು ಪರಿಚಯ ಇಲ್ಲಿದೆ.

ಸೋನು ನಿಗಮ್ ಮತ್ತು ಅರ್ಮಾನ್ ಮಲಿಕ್.


ಸೋನು ನಿಗಮ್
ಹರಿಯಾಣ ಮೂಲದ ಬಾಲಿವುಡ್ ಸಿಂಗರ್ ಸೋನು ನಿಗಮ್ ಹಿಂದಿಗಿಂತ ಹೆಚ್ಚು ಮಿಂಚಿದ್ದು ಕನ್ನಡದಲ್ಲಿ. ಜತೆಗೆ ಅವರು ಕರ್ನಾಟಕ ತನ್ನ 2ನೇ ಮನೆ ಎಂದೇ ಹೇಳಿಕೊಂಡಿದ್ದಾರೆ. 2003ರಲ್ಲಿ ತೆರೆಕಂಡ ಹಿಂದಿಯ ʼಕಲ್ ಹೊ ನಾ ಹೊʼ ಚಿತ್ರದ ಟೈಟಲ್ ಟ್ರ್ಯಾಕ್ಗೆ ರಾಷ್ಟ್ರ ಪ್ರಶಸ್ತಿ ಪಡೆದ ಅವರು ಕನ್ನಡದಲ್ಲಿ ಅನೇಕ ಹಿಟ್ ಗೀತೆಗಳನ್ನು ನೀಡಿದ್ದಾರೆ. 1996ರಲ್ಲಿ ತೆರೆಕಂಡ ಕನ್ನಡದ ʼಜೀವನದಿʼ ಚಿತ್ರದ ʼಎಲ್ಲೋ ಯಾರೋʼ ಸೋನು ನಿಗಮ್ ಧ್ವನಿ ನೀಡಿದ ಮೊದಲ ಕನ್ನಡದ ಹಾಡು. ಅದಾದ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ. ಕಳೆದ ವರ್ಷ ತೆರೆಕಂಡ ʼಕೃಷ್ಣ ಪ್ರಣಯ ಸಖಿʼ ಚಿತ್ರದ ಹಾಡು ಮತ್ತು ʼಮಾಯಾವಿʼ ಆಲ್ಬಂ ಸಾಂಗ್ ಸೂಪರ್ ಹಿಟ್ ಆಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ʼʼಕನ್ನಡ ಕನ್ನಡ ಎನ್ನುವುದಕ್ಕೇ ಪಹಲ್ಗಾಮ್ ಘಟನೆ ನಡೆದಿದ್ದುʼʼ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಅವರ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದ, ಇದೀಗ ಕ್ಷಮೆಯಾಚಿಸಿದ್ದಾರೆ. ಮುಂದೇನಾಗಲಿದೆ ಎನ್ನುವ ಕುತೂಹಲ ಮೂಡಿದೆ.

ಅರ್ಮಾನ್ ಮಲಿಕ್
ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ ಇದೀಗ ಸ್ಯಾಂಡಲ್ವುಡ್ನಲ್ಲಿಯೂ ಜನಪ್ರಿಯ ಹೆಸರು. 2007ರಲ್ಲಿ ರಿಲೀಸ್ ಆದ ʼತಾರೆ ಝಮೀನ್ ಪರ್ʼ ಹಿಂದಿ ಚಿತ್ರದ ʼಬುಮ್ ಬುಮ್ ಬೋಲೆʼ ಹಾಡಿನ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ಬಳಿಕ ಸ್ಯಾಂಡಲ್ವುಡ್ನಲ್ಲಿಯೂ ಸಾಕಷ್ಟು ಹಿಟ್ ಸಾಂಗ್ ನೀಡಿದ್ದಾರೆ. 2015ರಲ್ಲಿ ಬಿಡುಗಡೆಯಾದ ʼಸಿದ್ಧಾರ್ಥ್ʼ ಚಿತ್ರಕ್ಕೆ ಧ್ವನಿ ನೀಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು ಬಳಿಕ ಧ್ವನಿ ನೀಡಿದ ʼಮುಂಗಾರು ಮಳೆ 2ʼ, ʼಹೆಬ್ಬುಲಿʼ, ʼಚಕ್ರವರ್ತಿʼ, ʼರಾಗʼ, ʼತಾರಕ್ʼ ಮುಂತಾದ ಚಿತ್ರಗಳ ಹಾಡುಗಳು ಸೂಪರ್ ಹಿಟ್ ಎನಿಸಿಕೊಂಡಿವೆ.

ಕೈಲಾಸ್ ಖೇರ್
ಕನ್ನಡದ ಚಿತ್ರರಂಗದಲ್ಲಿ ಮಿಂಚುತ್ತಿರುವ ಮತ್ತೊಬ್ಬ ಬಾಲಿವುಡ್ ಸಿಂಗರ್ ಕೈಲಾಸ್ ಖೇರ್. 2005ರಲ್ಲಿ ಬಿಡುಗಡೆಯಾದ ʼವಾದಾʼ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಕೈಲಾಸ್ ಖೇರ್ ಕನ್ನಡಕ್ಕೆ ಬಂದಿದ್ದು, 2007ರಲ್ಲಿ ತೆರೆಕಂಡ ʼಈ ಪ್ರೀತಿ ಏಕೆ ಭೂಮಿ ಮೇಲಿದೆʼ ಸಿನಿಮಾ ಮೂಲಕ. ಆ ಬಳಿಕ ಇವರು ಧ್ವನಿ ನೀಡಿದ ʼಜಂಗ್ಲೀʼ, ʼಜಾಕಿʼ, ʼಹುಡುಗರುʼ, ʼಸಿದ್ಲಿಂಗುʼ, ʼಭಜರಂಗಿʼ, ʼಅಂಜನಿ ಪುತ್ರʼ, ʼಭಜರಂಗಿ 2ʼ, ʼಕೆಡಿʼ ಮುಂತಾದ ಚಿತ್ರಗಳ ಹಾಡುಗಳು ಸೂಪರ್ ಹಿಟ್ ಆಗಿವೆ.

ಕಾರ್ತಿಕ್
ತಮಿಳುನಾಡು ಮೂಲದ ಕಾರ್ತಿಕ್ ಸ್ಯಾಂಡಲ್ವುಡನಲ್ಲೂ ಸಖತ್ ಫೇಮಸ್. ರೊಮ್ಯಾಂಟಿಕ್ ಸಾಂಗ್ಗಳಿಗೆ ಇವರ ಧ್ವನಿ ಪರ್ಫೆಕ್ಟ್ ಮ್ಯಾಚ್ ಆಗುತ್ತದೆ. 2001ರಲ್ಲಿ ತಮಿಳಿನ ʼಸ್ಟಾರ್ʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಅವರು ಧ್ವನಿ ನೀಡಿದ ಕನ್ನಡ ಮೊದಲ ಚಿತ್ರ 2004ರಲ್ಲಿ ತೆರೆಕಂಡ ʼಜ್ಯೇಷ್ಠʼ. ʼಐಶ್ವರ್ಯಾʼ, ʼಜೊತೆ ಜೊತೆಯಲಿʼ, ʼಗೆಳೆಯʼ, ʼಸವಿ ಸವಿ ನೆನಪುʼ, ʼಅರಸುʼ, ʼಮುಸ್ಸಂಜೆ ಮಾತುʼ, ʼಸ್ಲಮ್ ಬಾಲʼ, ʼನಂದ ಲವ್ಸ್ ನಂದಿತಾʼ, ʼಪೃಥ್ವಿʼ, ನಿನ್ನಿಂದಲೇʼ ಮುಂತಾದ ಕನ್ನಡ ಚಿತ್ರಗಳಿಗೆ ಹಾಡಿದ್ದಾರೆ.

ಸಿದ್ ಶ್ರೀರಾಮ್
ದಕ್ಷಿಣ ಭಾರತದ ಬಹು ಬೇಡಿಕೆಯ ಗಾಯಕ ಸಿದ್ ಶ್ರೀರಾಮ್ ಸ್ಯಾಂಡಲ್ವುಡ್ನಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ತಮಿಳುನಾಡು ಮೂಲದ ಇವರು ಧ್ವನಿ ನೀಡಿದ ಕನ್ನಡದ ʼಭಜರಂಗಿ 2ʼ, ʼಲವ್ ಯು ರಚ್ಚುʼ, ʼಲವ್ 360ʼ ಮುಂತಾದ ಚಿತ್ರಗಳ ಹಾಡು ಸೂಪರ್ ಹಿಟ್ ಆಗಿವೆ. ವಿವಿಧ ಭಾಷೆಗಳ ಜತೆಗೆ ಸ್ಯಾಂಡಲ್ವುಡ್ನಲ್ಲಿಯೂ ಇವರಿಗೆ ಬೇಡಿಕೆ ಹೆಚ್ಚಾಗಿದೆ. ವಿಶಿಷ್ಟ ಧ್ವನಿ ಇವರ ವಿಶೇಷತೆ.