Vishwavani Editorial: ದುಡಿಯುವ ಕೈಗಳಿಗೆ ಶಕ್ತಿ ಸಿಗಲಿ
ನಿಶ್ಚಿತ ಉದ್ಯೋಗದಲ್ಲಿ ನೆಲೆಗೊಂಡಿರುವ ನೌಕರರು/ಕಾರ್ಮಿಕರಿಗಾದರೆ ತಿಂಗಳಿಗೊಮ್ಮೆ ನಿಗದಿತ ವೇತನ ಹಾಗೂ ಇತರ ಸೌಲಭ್ಯಗಳು ಸಿಗುವ ಖಾತ್ರಿಯಿರುತ್ತದೆ; ಆದರೆ ರಸ್ತೆ ಬದಿಯ ವ್ಯಾಪಾರಿಗಳು, ತಳ್ಳುಗಾಡಿಗಳಲ್ಲಿ ತರಕಾರಿ-ಹಣ್ಣು ಮಾರುವವರು, ದಿನಗೂಲಿ ಕಾರ್ಮಿಕರು ಮುಂತಾದ ಅಸಂಘಟಿತ ವಲಯದ ಶ್ರಮಿಕರದ್ದು ನಿತ್ಯವೂ ಅನಿಶ್ಚಿತತೆಯ ಬದುಕೇ.


ಇಂದು (ಮೇ 1) ಕಾರ್ಮಿಕರ ದಿನ. ಶ್ರಮಿಕ ವರ್ಗದ ಪರಿಶ್ರಮ-ಪ್ರತಿಭೆ, ಉತ್ಪಾದನಾಶೀಲತೆ ಹಾಗೂ ಬದ್ಧತೆ ಮುಂತಾದ ಗುಣ-ವಿಶೇಷಗಳನ್ನು ನೆನೆಯಬೇಕಾದ ದಿನವಿದು, ಸಂಭ್ರಮಿಸಬೇಕಾದ ಪರ್ವ ಕಾಲವಿದು. ಆದರೆ ವಸ್ತುಸ್ಥಿತಿಯನ್ನೊಮ್ಮೆ ಅವಲೋಕಿಸಿದರೆ, ಕಾರ್ಮಿಕ ವಲಯದಲ್ಲಿ ಇಂಥ ಸಂಭ್ರಮದ ವಾತಾವರಣ ದಿನಗಳೆದಂತೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣಗಳು ಹಲವು. ತಂತ್ರಜ್ಞಾನವನ್ನು ಹಾಗೂ ಯಾಂತ್ರೀಕರಣದ ಪರಿಕಲ್ಪನೆಯನ್ನು ಔದ್ಯಮಿಕ ರಂಗವು ಅಗತ್ಯ ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೆಚ್ಚುತ್ತಿರುವುದರಿಂದಾಗಿ, ಅಂಥ ಉದ್ಯೋಗ ಸಾಧ್ಯತೆಗಳನ್ನೇ ನೆಚ್ಚಿಕೊಂಡಿದ್ದ ಶ್ರಮಿಕರು, ನೌಕರರು ಅವಕಾಶಗಳಿಲ್ಲದೆ ಬಳಲುವಂತಾಗಿದೆ. ಹಾಗೆಂದ ಮಾತ್ರಕ್ಕೆ ಯಂತ್ರಗಳು ಮತ್ತು ತಂತ್ರಜ್ಞಾನದ ಸಾಧ್ಯತೆಗಳಿಗೆ ಒಡ್ಡಿಕೊಳ್ಳ ಬಾರದು ಅಂತಲ್ಲ; ಉತ್ಪಾದಕತೆ ಯನ್ನು ಹೆಚ್ಚಿಸುವ ಭರದಲ್ಲಿ ದುಡಿಯುವ ಕೈಗಳಿಂದ ಅನ್ನವನ್ನು ಕಸಿದುಕೊಳ್ಳುವ ಆಲೋಚನೆ ಸಲ್ಲ, ಅಲ್ಲವೇ? ಈ ಸಂದರ್ಭದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಕೆಲಸಗಾರರ ಬಗ್ಗೆ ಒಮ್ಮೆ ಆಲೋಚಿಸಲೇಬೇಕು.
ನಿಶ್ಚಿತ ಉದ್ಯೋಗದಲ್ಲಿ ನೆಲೆಗೊಂಡಿರುವ ನೌಕರರು/ಕಾರ್ಮಿಕರಿಗಾದರೆ ತಿಂಗಳಿಗೊಮ್ಮೆ ನಿಗದಿತ ವೇತನ ಹಾಗೂ ಇತರ ಸೌಲಭ್ಯಗಳು ಸಿಗುವ ಖಾತ್ರಿಯಿರುತ್ತದೆ; ಆದರೆ ರಸ್ತೆ ಬದಿಯ ವ್ಯಾಪಾರಿಗಳು, ತಳ್ಳುಗಾಡಿಗಳಲ್ಲಿ ತರಕಾರಿ-ಹಣ್ಣು ಮಾರುವವರು, ದಿನಗೂಲಿ ಕಾರ್ಮಿಕರು ಮುಂತಾದ ಅಸಂಘಟಿತ ವಲಯದ ಶ್ರಮಿಕರದ್ದು ನಿತ್ಯವೂ ಅನಿಶ್ಚಿತತೆಯ ಬದುಕೇ.
ಅಂದು ವ್ಯಾಪಾರವಾದರೆ/ಕೆಲಸ ಸಿಕ್ಕರೆ ಮಾತ್ರವೇ ಅವಲಂಬಿತರಿಗೆ ಮಾರನೆಯ ದಿನ ಮೂರು ಹೊತ್ತಿನ ಗಂಜಿಯನ್ನು ನೀಡಲು ಸಾಧ್ಯ ಎಂಬ ಪರಿಸ್ಥಿತಿ ಇಂಥ ಬಹುತೇಕರದ್ದು. ಇನ್ನು ಹಂಗಾಮಿ ಅಥವಾ ಅರೆಕಾಲಿಕ ಉದ್ಯೋಗಗಳಲ್ಲಿ ಮೂಗಿಗೆ ಕವಡೆ ಕಟ್ಟಿಕೊಂಡು ದುಡಿಯುತ್ತಿರುವವರ ಪರಿಸ್ಥಿತಿಯೂ ಹೇಳಿಕೊಳ್ಳುವಷ್ಟು ಸಮಾಧಾನಕರವಾಗಿಲ್ಲ. ಜತೆಗೆ, ಕೆಲವೊಂದು ಕಂಪನಿಗಳು/ ಸಾಫ್ಟ್ ವೇರ್ ಸಂಸ್ಥೆಗಳು ಪೈಪೋಟಿಗೆ ಬಿದ್ದಿರುವ ರೀತಿಯಲ್ಲಿ ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿರುವಂಥ ಬೆಳವಣಿಗೆಗಳನ್ನೂ ನೋಡುತ್ತಿದ್ದೇವೆ.
ಕೈಯಲ್ಲೊಂದು ಉದ್ಯೋಗವಿರುವ ಭರವಸೆಯೊಂದಿಗೆ ಸ್ವಂತ ಮನೆ, ವಾಹನ ಇತ್ಯಾದಿಗಳಿಗೆ ಸಾಲ ಮಾಡಿಕೊಂಡಿರುವವರು ಇಂಥ ಹಠಾತ್ ಬೆಳವಣಿಗೆಯಿಂದ ತತ್ತರಿಸುವಂತಾಗಿದೆ. ಇಂಥ ಎಲ್ಲರ ಸವಾಲು ಮತ್ತು ಸಮಸ್ಯೆಗಳತ್ತ ಆಳುಗರು ಗಮನಹರಿಸಲು ಇದು ಪರ್ವಕಾಲವಾಗಿದೆ.