Chief Minister Siddaramaiah: ಗ್ಯಾರಂಟಿಯಾಚೆಯ ಅಭಿವೃದ್ದಿಗೆ ಸರಕಾರ ಬದ್ಧ
ಪ್ರತಿಯೊಬ್ಬ ಪ್ರಜೆಗೂ ಜೀವನ ನಿರ್ವಹಣೆಯ ಹಕ್ಕನ್ನು ಅಂದರೆ ಬದುಕುವ ಹಕ್ಕನ್ನು ನೀಡಬೇಕೆಂದು ಸಂವಿಧಾನದ ಪರಿಚ್ಚೇದ 39ರ ಪ್ರಕಾರ ಹೇಳುತ್ತದೆ. ಪರಿಚ್ಛೆದ 15 (3) ಪ್ರತಿಯೊಬ್ಬ ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಶೇಷ ಕಾನೂನು ಮಾಡಲು ಅವಕಾಶ ನೀಡಿದೆ. ಜನರ ಪೌಷ್ಠಿಕ ಮತ್ತು ಜೀವನ ಮಟ್ಟವನ್ನು ಹೆಚ್ಚಿಸಿ ಆರೋಗ್ಯವನ್ನು ಅಭಿವೃದ್ದಿ ಪಡಿಸುವುದು ಒಂದು ಸರ್ಕಾರದ ಪ್ರಾಥಮಿಕ ಕರ್ತವ್ಯ ಎಂದು ಸಂವಿಧಾನದ ಪರಿಚ‍್ಚೇದ 47ರಡಿಯ ರಾಜನೀತಿಯ ನಿರ್ದೇಶಿತ ತತ್ವ ಹೇಳಿದೆ


ಸಾಧನಾಪಥ
ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ವಿಶ್ವಾಸವೇ ಚುನಾಯಿತ ಸರ್ಕಾರದ ಬುನಾದಿ. ರಾಜಕೀಯ ಅಧಿಕಾರ ಎನ್ನುವುದು ಸರ್ಕಾರದ ವಿಶೇಷಾಧಿಕಾರವೇನಲ್ಲ, ಅದು ಜನತೆಯ ಸೇವೆ ಮಾಡಲು ಒದಗಿ ಬಂದ ಅವಕಾಶ ಅಷ್ಟೆ. ಪ್ರಜೆಗಳು ನೀಡುವ ತೆರಿಗೆ ನಮ್ಮ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕ, ಇದು ನಮ್ಮ ಜನರ ಬೆವರಿನ ಫಲ. ಸರ್ಕಾರದ ಖಜಾನೆಯಲ್ಲಿರುವ ಹಣ ಸರ್ಕಾರದ್ದಲ್ಲ, ಅದು ಜನರದ್ದು, ಆ ಹಣದ ವ್ಯವಹಾರ ನಡೆಸುವ ಆಡಳಿತರೂಢರಾದ ನಾವು ತೆರಿಗೆದಾರರ ಟ್ರಸ್ಟಿಗಳು. ಈ ಹಣ ಪೋಲಾಗಲು ಬಿಡಬಾರದು. ತೆರಿಗೆಯ ಪ್ರತಿಯೊಂದು ಪೈಸೆ ಕೂಡಾ ಪ್ರಜೆಗಳ ಕಲ್ಯಾಣಕ್ಕೆ ವಿನಿಯೋಗವಾಗಬೇಕು ಮತ್ತು ಜಾತಿ, ಧರ್ಮ, ಪಕ್ಷ, ಪ್ರದೇಶಗಳ ಅಂತರ ಇಲ್ಲದ ಪ್ರತಿಯೊಂದು ಮನೆಯಲ್ಲಿಯೂ ನಮ್ಮ ಸರ್ಕಾರದ ಫಲಾನುಭವಿಗಳಿರಬೇಕು ಎನ್ನುವುದು ನಮ್ಮ ಸರ್ಕಾರದ ದೃಢ ನಿರ್ಧಾರ. ಈ ಮೂಲಕ ಸುಖ, ಶಾಂತಿ ಮತ್ತು ನೆಮ್ಮದಿಯ ಬಲಿಷ್ಠ ಕರ್ನಾಟಕವನ್ನು ನಿರ್ಮಾಣ ಮಾಡುವುದು ನಮ್ಮ ಸಂಕಲ್ಪ. ಈ ಹಾದಿಯಲ್ಲಿ ಸಾಗಿರುವ ನಮ್ಮ ಸರ್ಕಾರದ ನಡಿಗೆಗೆ ಈಗ ಎರಡು ವರ್ಷ.
ಉದ್ದೇಶದಲ್ಲಿ ಪ್ರಾಮಾಣಿಕತೆ, ಹಣದ ವಿನಿಯೋಗದಲ್ಲಿ ಪಾರದರ್ಶಕತೆ ಮತ್ತು ಮಾಡುವ ಕೆಲಸ ಗಳ ಬಗ್ಗೆ ಉತ್ತರದಾಯಿತ್ವ - ಇದು ನಮ್ಮ ಸರ್ಕಾರದ ಬದ್ದತೆ. ಹಸಿದ ಹೊಟ್ಟೆಗೆ ಅನ್ನ, ನೆಮ್ಮದಿಯ ಜೀವನಕ್ಕೆ ಆರೋಗ್ಯ, ವಾಸಕ್ಕೊಂದು ಸೂರು, ಸ್ವಾವಲಂಬಿ ಬದುಕಿಗಾಗಿ ಶಿಕ್ಷಣ, ದುಡಿಯುವ ಕೈಗಳಿಗೆ ಉದ್ಯೋಗ, ಶ್ರಮಕ್ಕೆ ತಕ್ಕ ಫಲ, ಅಸಹಾಯಕರಿಗೆ ರಕ್ಷಣೆ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುವ ವಾತಾವರಣ - ಇವು ಜವಾಬ್ದಾರಿಯುತ ಸರ್ಕಾರದ ಆದ್ಯತೆಗಳು ಮಾತ್ರವಲ್ಲ, ಸಂವಿಧಾನ ಬದ್ದ ಕರ್ತವ್ಯ.
ಇದನ್ನೂ ಓದಿ: CM Siddaramaiah: ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇರಬೇಕು, ತೋರಿಕೆ ಇರಬಾರದು: ಸಿದ್ದರಾಮಯ್ಯ
ಪ್ರತಿಯೊಬ್ಬ ಪ್ರಜೆಗೂ ಜೀವನ ನಿರ್ವಹಣೆಯ ಹಕ್ಕನ್ನು ಅಂದರೆ ಬದುಕುವ ಹಕ್ಕನ್ನು ನೀಡಬೇಕೆಂದು ಸಂವಿಧಾನದ ಪರಿಚ್ಚೇದ 39ರ ಪ್ರಕಾರ ಹೇಳುತ್ತದೆ. ಪರಿಚ್ಛೆದ 15 (3) ಪ್ರತಿಯೊಬ್ಬ ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಶೇಷ ಕಾನೂನು ಮಾಡಲು ಅವಕಾಶ ನೀಡಿದೆ. ಜನರ ಪೌಷ್ಠಿಕ ಮತ್ತು ಜೀವನ ಮಟ್ಟವನ್ನು ಹೆಚ್ಚಿಸಿ ಆರೋಗ್ಯವನ್ನು ಅಭಿವೃದ್ದಿಪಡಿಸುವುದು ಒಂದು ಸರ್ಕಾರದ ಪ್ರಾಥಮಿಕ ಕರ್ತವ್ಯ ಎಂದು ಸಂವಿಧಾನದ ಪರಿಚ‍್ಚೇದ 47ರಡಿಯ ರಾಜನೀತಿಯ ನಿರ್ದೇಶಿತ ತತ್ವ ಹೇಳಿದೆ. ಆದ್ದರಿಂದ ನಾವು ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಒಂದು ಜವಾಬ್ದಾರಿಯುತ ಸರ್ಕಾರದ ಮೂಲಭೂತ ಕರ್ತವ್ಯವಾಗಿದೆ.
ಜನರಿಗೆ ತಲವಾರು-ಕತ್ತಿ-ತ್ರಿಶೂಲ ಹಂಚುವುದು, ಪ್ರಜೆಗಳ ಊಟದ ತಟ್ಟೆಯಲ್ಲಿ, ಮನೆಯ ಫ್ರಿಜ್ ಗಳಲ್ಲಿರುವ ಆಹಾರ ಏನಿದೆ ಎಂದು ಇಣುಕಿ ನೋಡಿ ಹಲ್ಲೆ ನಡೆಸುವುದು, ಜಾತಿ-ಧರ್ಮದ ಹೆಸರಲ್ಲಿ ದ್ವೇಷ, ಅಸೂಯೆ, ಹಿಂಸೆಯನ್ನು ಹರಡುವುದು ಸಂವಿಧಾನ ವಿರೋಧಿ, ಕಾನೂನು ವಿರೋಧಿ ಮತ್ತು ಜನವಿರೋಧಿಯಾದುದು. ತಮಾಷೆಯೆಂದರೆ ಈ ರೀತಿ ದ್ವೇಷ ಹಂಚುವುದರಲ್ಲಿ ನಿರತ ರಾಗಿರುವ ಮತ್ತು ಜಾತಿ ಧರ್ಮಗಳ ನಡುವೆ ಕಲಹ ಹುಟ್ಟಿಸುತ್ತಿರುವ ರಾಜಕೀಯ ಪಕ್ಷಗಳ ನಾಯಕರೇ ಇಂದು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿ ಮತ್ತು ದುರಾಡಳಿತದ ಫಲವಾದ ಬೆಲೆ ಏರಿಕೆ ಮತ್ತು ನಿರುದ್ಯೋಗಗಳಿಂದಾಗಿ ವಿಪರೀತ ಆರ್ಥಿಕ ಒತ್ತಡಕ್ಕೆ ಸಿಕ್ಕ ಜನರ ಜೇಬು ಖಾಲಿಯಾಗಿದೆ. ಅವರನ್ನು ಈ ಆರ್ಥಿಕ ಸಂಕಟದಿಂದ ಪಾರು ಮಾಡಲು, ಸಾಲದ ಶೂಲದಿಂದ ತಪ್ಪಿಸಲು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಅವಶ್ಯಕತೆ ಇತ್ತು. ಅದನ್ನು ನಮ್ಮ ಸರ್ಕಾರ ಮಾಡಿದೆ.
ನಮ್ಮ ಐದು ಗ್ಯಾರಂಟಿ ಯೋಜನೆಗಳಿಗೆ ಖರ್ಚಾಗುತ್ತಿರುವ ಹಣ 65 ಸಾವಿರ ಕೋಟಿ ರೂಪಾಯಿ. ನಮ್ಮ. ಈ ಹಣ ರಾಜ್ಯದ 1.56 ಕುಟುಂಬಗಳಿಗೆ ಅಂದರೆ ಒಂದು ಕುಟುಂಬದಲ್ಲಿ ಕನಿಷ್ಠ ನಾಲ್ಕು ಮಂದಿ ಸದಸ್ಯರಿದ್ದರೆ ಐದುವರೆ ಕೋಟಿ ಜನರಿಗೆ ತಲುಪಲಿದೆ. ಪ್ರತಿಯೊಂದು ಕುಟುಂಬಕ್ಕೆ ಪ್ರತಿ ತಿಂಗಳು ತಲಾ ಎಂಟರಿಂದ ಒಂಬತ್ತು ಸಾವಿರ ರೂಪಾಯಿಗಳು ವರ್ಷಕ್ಕೆ ಒಂದು ಲಕ್ಷ ರೂಪಾಯಿ ನೇರವಾಗಿ ಜನರ ಖಾತೆಗೆ ತಲುಪಲಿದೆ, ಇದರಲ್ಲಿ 40% ಕಮಿಷನ್ ಇಲ್ಲವೇ ಇಲ್ಲವೆನ್ನುವುದು ಬಹಳ ಮುಖ್ಯ.
ಶ್ರೀಮಂತರ ತೆರಿಗೆ ಹಣದಿಂದ ಬಡವರಿಗೆ ಉಚಿತ ಯೋಜನೆಗಳನ್ನು ನೀಡಲಾಗುತ್ತಿದೆ ಎನ್ನುವ ಟೀಕೆಯನ್ನೂ ನಾನು ಗಮನಿಸಿದ್ದೇನೆ. ಸತ್ಯ ಸಂಗತಿ ಎಂದರೆ ಒಂದು ಸರ್ಕಾರ ಸಂಗ್ರಹಿಸುವ ನೂರು ರೂಪಾಯಿ ತೆರಿಗೆ ಹಣದಲ್ಲಿ ಮೂರನೇ ಎರಡರಷ್ಟು ಭಾಗ ಬಡವರಿಂದ ಬರುತ್ತದೆ. ನಮ್ಮ ದೇಶದ ಒಟ್ಟು ಜಿಎಸ್ ಟಿ ಸಂಗ್ರಹ ಸುಮಾರು 18 ಲಕ್ಷ ಕೋಟಿ, ಅದರಲ್ಲಿ ಸುಮಾರು 12 ಲಕ್ಷ ಕೋಟಿ ಜಿಎಸ್ ಟಿ ನೀಡುತ್ತಿರುವುದು ಶೇಕಡಾ 50ರಷ್ಟಿರುವ ಮಧ್ಯಮ, ಕೆಳಮಧ್ಯಮ ಮತ್ತು ಬಡವರು. ಕಾರ್ಮಿಕನೊಬ್ಬ ಸಂಪಾದನೆ ಮಾಡುವ ನೂರು ರುಪಾಯಿಯಲ್ಲಿ ಕನಿಷ‍್ಠ 30 ರೂಪಾಯಿ ತೆರಿಗೆ ರೂಪದಲ್ಲಿ ಸರ್ಕಾರದ ಖಜಾನೆ ಸೇರುತ್ತದೆ. ಒಂದು ಲೀಟರ್ ಪೆಟ್ರೋಲ್ ಖರೀದಿಸಿದರೆ ಕನಿಷ್ಠ 40 ರೂಪಾಯಿ ತೆರಿಗೆ ನೀಡಬೇಕಾಗುತ್ತದೆ.
15,000 ರೂಪಾಯಿ ಸಂಪಾದನೆ ಮಾಡುವ ಬಡವರು, ಕೂಲಿ ಕಾರ್ಮಿಕರು ಅಷ್ಟನ್ನು ಖರ್ಚು ಮಾಡುತ್ತಾರೆ. ಆ ಹಣ ಮತ್ತೆ ಮಾರುಕಟ್ಟೆಗೆ ಬರುತ್ತದೆ. ಆ ಹದಿನೈದು ಸಾವಿರ ರೂಪಾಯಿಯ ಕನಿಷ್ಠ 15% ಭಾಗ ಜಿಎಎಸ್ ಟಿ ಸರ್ಕಾರದ ಖಜಾನೆಗೆ ಹೋಗುತ್ತದೆ. ಇತ್ತೀಚೆಗೆ ರಾಜ್ಯದ ಜಿಎಸ್ ಟಿ ತೆರಿಗೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿರುವುದು ಇದಕ್ಕೆ ಸಾಕ್ಷಿ. ಶ್ರೀಮಂತರ ಕೈಗೆ ಸಿಗುವ ಒಂದು ಲಕ್ಷ ರೂಪಾಯಿಯನ್ನು ಪೂರ್ತಿ ಖರ್ಚು ಮಾಡುವುದಿಲ್ಲ. ಅದರಿಂದ ಜಿಎಸ್ ಟಿ ಆ ಪ್ರಮಾಣದಲ್ಲಿ ಪಾವತಿಯಾಗಿರುವುದಿಲ್ಲ.. ಜಿಡಿಪಿಗೆ ದೊಡ್ಡ ಬಂಡವಾಳಿಗರ ಕೊಡುಗೆ ಶೇಕಡಾ 50-55 ಮಾತ್ರ. ಸರ್ಕಾರದ ವಿಶೇಷ ಸೌಲಭ್ಯ, ಬೆಂಬಲ ಪಡೆಯದ ಸಣ್ಣ ಮತ್ತು ಅತಿ ಸಣ್ಣ ಕೃಷಿ ಕೂಲಿ ಕಾರ್ಮಿಕರ ಕೊಡುಗೆ ಅಂದಾಜು 40-45% ಆಗಿದೆ.
2019ರಲ್ಲಿ ಉದ್ಯಮಿಗಳ ಮೇಲಿನ ಕಾರ್ಪೋರೇಟ್ ತೆರಿಗೆ ಪ್ರಮಾಣವನ್ನು ಶೇಕಡಾ 30ರಿಂದ ಶೇಕಡಾ 22ಕ್ಕೆ ಇಳಿಸಲಾಯಿತು. ಇದರಿಂದಾಗಿ ವರ್ಷಕ್ಕೆ ಒಂದು ಲಕ್ಷ ಕೋಟಿ ಆದಾಯ ಕಡಿಮೆಯಾಯಿತು. ನಾಲ್ಕು ವರ್ಷದಲ್ಲಿ ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿ ನಷ್ಟ. ವಂಚಕ ಉದ್ಯಮಿಗಳು 12 ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ಮುಳುಗಿಸಿ ದೇಶ ಬಿಟ್ಟು ಓಡಿ ಹೋದರು. ಆಗ ಬಾಯಿ ಮುಚ್ಚಿಕೊಂಡಿದ್ದವರು, ಬಡವರ ಪರವಾದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾತ್ರ ಮೂರು ಹೊತ್ತು ಟೀಕಿಸುತ್ತಾ ಕೂತಿದ್ದಾರೆ. ಇವರನ್ನು ಬಡವರ ವಿರೋಧಿಗಳು ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇ?
ನಮ್ಮ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಗ್ಯಾರಂಟಿಗಳಾಚೆಗೂ ನಮ್ಮ ಸರ್ಕಾರದ ಬದ್ಧತೆ ವ್ಯಾಪಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ 2024-25ನೇ ಸಾಲಿನಲ್ಲಿ 39,121 ಕೋಟಿ ರೂ. ಮೀಸಲಿಟ್ಟಿದ್ದೇವೆ. ರೂ.4,761.15 ಕೋಟಿ ವೆಚ್ಚದಲ್ಲಿ 3.05 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ವಿತರಿಸುವ ಕಾರ್ಯದಲ್ಲಿದ್ದೇವೆ. ಡಾ. ಡಿ.ಎಂ. ನಂಜುಂಡಪ್ಪನವರ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನ ಗೊಳಿಸಿ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಇದುವರೆಗೆ ರೂ.37,662 ಕೋಟಿ ರೂ ವೆಚ್ಚ ಮಾಡಿದ್ದೇವೆ. ಅಂಗನವಾಡಿ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳಕ್ಕೂ ಕ್ರಮ ವಹಿಸಿದ್ದೇವೆ. ಇದೀಗ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅವರು ವಾಸಿಸುತ್ತಿರುವ ಸ್ಥಳಗಳಿಗೆ ಹಕ್ಕುಪತ್ರ ನೀಡುವ ಐತಿಹಾಸಿಕ ಸಾಹಸಕ್ಕೂ ಮುಂದಾಗಿದ್ದೇವೆ.
ಇನ್ನುಳಿದ ಅಭಿವೃದ್ಧಿಯ ವಿಚಾರವನ್ನು ಗಮನಿಸುವುದಾದರೆ, ಮಾನವ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲಗಳ ಸಮರ್ಥ, ದಕ್ಷ, ಪರಿಣಾಮಕಾರಿ ಬಳಕೆ ಹಾಗೂ ಕೃಷಿ, ಸೇವಾವಲಯ, ಕೈಗಾರಿಕಾ ವಲಯಗಳ ಸಮಗ್ರ ಬೆಳವಣಿಗೆಗೆ ಅಗತ್ಯವಾದ ಭೌತಿಕ, ಆರ್ಥಿಕ, ಸಾಮಾಜಿಕ ಪರಿಸರವನ್ನು ಸೃಷ್ಟಿಸುವಲ್ಲಿ ನಮ್ಮ ಸರ್ಕಾರವು ದೇಶಕ್ಕೇ ಮಾದರಿಯಾಗಿದೆ. ನವೀನ ಆಲೋಚನೆಗಳು, ನವೋ ನ್ವೇಷಣೆಗಳ ಮೂಲಕ ಜಾಗತಿಕ ಪ್ರೇರಣೆಯ ರಂಗಸ್ಥಳವಾಗಿದೆ.
ಕರ್ನಾಟಕ ಸರ್ಕಾರವು ಮಾನವ ಸಂಪನ್ಮೂಲವನ್ನು, ವಿಶೇಷವಾಗಿ ದುಡಿಯುವ ವಯೋಮಾನದ ವರ್ಗವನ್ನು ಹಾಗೂ ಯುವಪೀಳಿಗೆಯನ್ನು ಅಭಿವೃದ್ಧಿಯ ಎಂಜಿನ್‌ಗಳೆಂದೇ ಪರಿಗಣಿಸುತ್ತದೆ. ಈ ವರ್ಗದಲ್ಲಿ ನಿರಂತರ ಕಲಿಕೆ, ಕೌಶಲಗಳನ್ನು ವೃದ್ಧಿಸುವುದು, ಆ ಮೂಲಕ ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ನಾವು ಜಾರಿಗೆ ತಂದಿದ್ದೇವೆ. ಅದೇ ರೀತಿ, ರಾಜ್ಯದಲ್ಲಿ ವಿಫುಲ ಉದ್ಯೋಗಾವ ಕಾಶಗಳು ಸೃಷ್ಟಿಯಾಗುವಂತಹ ಔದ್ಯಮಿಕ ವಾತಾವರಣವನ್ನು ನಿರ್ಮಿಸಿದ್ದೇವೆ. ಇದಕ್ಕೆ ಅಗತ್ಯ ವಾದ ಮೂಲಸೌಕರ್ಯ ಸೃಜನೆ, ನೀತಿನಿರೂಪಣೆಗಳು, ಹೂಡಿಕೆದಾರರ ಸಮಾವೇಶಗಳನ್ನು ಕೈಗೊಂಡಿದ್ದೇವೆ. ಮುಂದಿನ ಐದು ವರ್ಷದಲ್ಲಿ ರೂ. 7.5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಕರ್ಷಣೆಯನ್ನು, 20 ಲಕ್ಷ ಉದ್ಯೋಗಗಳ ಸೃಷ್ಟಿಯ ಗುರಿಯನ್ನು ನಾವು ಹೊಂದಿದ್ದೇವೆ.
ಅಭಿವೃದ್ಧಿ ಎನ್ನುವುದು ಬೆಂಗಳೂರಿಗೆ ಮಾತ್ರವೇ ಸೀಮಿತವಾಗಬಾರದು ಎಂದು ‘ಬಿಯಾಂಡ್ ಬೆಂಗಳೂರು’ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಸ್ಥಳೀಯವಾಗಿ ಲಭ್ಯವಿರುವ ಮಾನವಿಕ ಕೌಶಲ್ಯ, ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಕೈಗಾರಿಕೆ, ಉದ್ಯಮಗಳ ಸ್ಥಾಪನೆಗೆ ಉತ್ತೇಜನ ನೀಡುವುದು ಒಂದು ಕ್ರಮವಾದರೆ, ಪ್ರತಿಯೊಂದು ಜಿಲ್ಲೆಯನ್ನೂ ಭವಿಷ್ಯದ ಅವಕಾಶಗಳಿಗೆ, ಹೂಡಿಕೆಗಳಿಗೆ ಪ್ರಶಸ್ತ ತಾಣವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದು ಮತ್ತೊಂದು ಪ್ರಮುಖ ಕ್ರಮವಾಗಿದೆ, ಇವೆರಡನ್ನೂ ನಮ್ಮ ಸರ್ಕಾರವು ಆದ್ಯತೆಯ ಮೇಲೆ ಕೈಗೊಂಡಿದೆ.
ಹಿಂದುಳಿದ ಪ್ರದೇಶವೆಂದು ಹಣೆಪಟ್ಟಿ ಹೊತ್ತಿದ್ದ ಹೈದರಾಬಾದ್ ಕರ್ನಾಟಕದಂತಹ ಭಾಗಗಳನ್ನು ನಿಜ ಅರ್ಥದಲ್ಲಿ ‘ಕಲ್ಯಾಣ ಕರ್ನಾಟಕ’ವಾಗಿಸಿರುವ ಶ್ರೇಯ ನಮ್ಮದಾಗಿದೆ. ಈ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ, ನಿಖರ ಯೋಜನೆಗಳ ಮೂಲಕ ಸಾವಿರಾರು ಕೋಟಿ ಹಣವನ್ನು ಇಂದು ನಮ್ಮ ಸರ್ಕಾರ ತೊಡಗಿಸಿದೆ. ಹೌದು, ಇದನ್ನು ನಾವು ಎಂದಿಗೂ ವ್ಯಯ ಎಂದು ಕರೆಯುವುದಿಲ್ಲ, ಬದಲಿಗೆ ಕರ್ನಾಟಕದ ಭವ್ಯ ಭವಿತವ್ಯಕ್ಕೆ, ಅಭಿವೃದ್ಧಿಗಾಗಿ ಮಾಡಿದ ಹೂಡಿಕೆ ಎಂದೇ ಕರೆಯುತ್ತೇವೆ. ಇಂದು ಈ ಜಿಲ್ಲೆಗಳ ಶಿಕ್ಷಣ, ಆರೋಗ್ಯ, ಸಂಪರ್ಕ ಕ್ಷೇತ್ರಗಳಲ್ಲಿ ಗುಣಾತ್ಮಕ ಬದಲಾವಣೆಗಳು ಕಂಡಿವೆ. ಹೂಡಿಕೆಯನ್ನು ಆಕರ್ಷಿಸುವ ಪ್ರಶಸ್ತ ತಾಣಗಳಾಗಿ ವಿಕಸಿತಗೊಳ್ಳುತ್ತಿವೆ.
ಕರ್ನಾಟಕವು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ಐಟಿ-ಬಿಟಿ, ನವೋದ್ಯೋಮಗಳಲ್ಲಿ ಹೊಂದಿದ್ದ ಮುಂಚೂಣಿಯನ್ನು ಮತ್ತಷ್ಟು ವ್ಯಾಪಕವಾಗಿ ವಿಸ್ತರಿಸುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ. ದೇಶವು ಅನುಕರಿಸುವಂತಹ ಹತ್ತು ಹಲವು ಉದ್ಯಮಸ್ನೇಹಿ ನೀತಿ, ಕಾರ್ಯಕ್ರಮ, ಯೋಜನೆಗಳನ್ನು ನಾವು ಜಾರಿಗೊಳಿಸಿದ್ದೇವೆ. ಜ್ಞಾನ, ವಿಜ್ಞಾನ, ಸಂಶೋಧನೆ, ಆರೋಗ್ಯ, ಆವಿಷ್ಕಾರಗಳು ಮುಪ್ಪರಿಗೊಂಡ ಭವಿಷ್ಯವರ್ತಿಯಾದ ‘ಕ್ವಿನ್ ಸಿಟಿ’ಯಂತಹ ಜಾಗತಿಕ ನಾವೀನ್ಯ ನಗರಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದೇವೆ.
ಮೆಟ್ರೋ ಜಾಲದ ವ್ಯಾಪಕ ವಿಸ್ತರಣೆ, ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇರಿಸಿರುವ ಹೆಜ್ಜೆ, ಪ್ರತಿಯೊಂದು ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿಗಳನ್ನು ಸುಗಮವಾಗಿ ಬೆಸೆಯುವ ಶ್ರೇಷ್ಠ ದರ್ಜೆಯ ರಸ್ತೆ ಸಂಪರ್ಕ, ವಿದ್ಯುನ್ಮಾನ ಸಂವಹನ ಮೂಲ ಸೌಕರ್ಯಗಳ ನಿರ್ಮಾಣವನ್ನು ಸಾಧ್ಯವಾಗಿಸಿದ್ದೇವೆ. ಭವಿಷ್ಯವರ್ತಿ ನ್ಯಾನೋ ತಂತ್ರಜ್ಞಾನ, ಸೆಮಿ ಕಂಡಕ್ಟರ್ ತಂತ್ರಜ್ಞಾನಗಳು ರಾಜ್ಯದಲ್ಲಿ ಆಳವಾಗಿ ನೆಲೆಯೂರಲು ಅಗತ್ಯ ಕ್ರಮ, ಪ್ರೋತ್ಸಾಹ ಗಳನ್ನು ನೀಡಿದ್ದೇವೆ.
ಇಂತಹ ಪಟ್ಟಿಗಳನ್ನು ನೀಡುತ್ತಾ ಸಾಗಿದರೆ, ಒಂದು ಕಿರುಹೊತ್ತಿಗೆಯಾದರೂ ಅಚ್ಚರಿಯಿಲ್ಲ. ಆದರೆ ಇವುಗಳನ್ನೆಲ್ಲ ನಮ್ಮ ಸಾಧನೆ ಎಂದು ಹೇಳಿಕೊಳ್ಳುವುದಕ್ಕಿಂತ ಚುನಾಯಿತ ಸರ್ಕಾರವಾಗಿ ನಾವು ಮಾಡಲೇಬೇಕಿದ್ದ ಕರ್ತವ್ಯಗಳೆಂದು ಭಾವಿಸಿದ್ದೇವೆ ಮತ್ತು ಈ ಯಶೋಗಾಥೆ ಮುಂದುವರಿಯಲಿದೆ. ಅಭಿವೃದ್ಧಿಯ ಆಯಾಮದಲ್ಲಿ ಸರ್ಕಾರಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುವ ವ್ಯವಸ್ಥೆ ನಮ್ಮ ಸಾರ್ವಜನಿಕ ವಲಯದಲ್ಲಿ ರೂಪುಗೊಳ್ಳಬೇಕು ಎಂಬುದು ನನ್ನ ಆಶಯ. ಆಗ ಮಾತ್ರ, ನಮ್ಮ ರಾಜ್ಯ ಮತ್ತು ದೇಶ ಪ್ರಗತಿಯ ಹಾದಿಯಲ್ಲಿ ದಾಪುಗಾಲಿಡಲಿದೆ.