ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LSG vs SRH: ಹೈದರಾಬಾದ್‌ಗೆ ಗೆಲುವಿನ 'ಅಭಿಷೇಕ'; ಟೂರ್ನಿಯಿಂದ ಹೊರಬಿದ್ದ ಲಕ್ನೋ

ಹರ್ಷಲ್‌ ಪಟೇಲ್‌ ಒಂದು ವಿಕೆಟ್‌ ಕೀಳುವ ಮೂಲಕ ಐಪಿಎಲ್‌ನಲ್ಲಿ ಅತಿ ವೇಗವಾಗಿ 150 ವಿಕೆಟ್‌ ಪೂರ್ತಿಗೊಳಿಸಿದ ಲಸಿತ್ ಮಾಲಿಂಗ ಅವರ ದಾಖಲೆ ಮುರಿದರು. ಜತೆಗೆ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್‌ ಎನಿಸಿಕೊಂಡರು.

ಹೈದರಾಬಾದ್‌ಗೆ ಗೆಲುವಿನ 'ಅಭಿಷೇಕ'; ಟೂರ್ನಿಯಿಂದ ಹೊರಬಿದ್ದ ಲಕ್ನೋ

Profile Abhilash BC May 19, 2025 11:33 PM

ಲಕ್ನೋ: ಸನ್‌ರೈಸರ್ಸ್‌ ಹೈದರಾಬಾದ್‌(LSG vs SRH) ವಿರುದ್ಧದ ಮಹತ್ವದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 6 ವಿಕೆಟ್‌ ಅಂತರದ ಸೋಲು ಕಾಣುವ ಮೂಲಕ ಹಾಲಿ ಆವೃತ್ತಿಯ ಐಪಿಎಲ್‌(IPL 2025) ಟೂರ್ನಿಯಿಂದ ಹೊರಬಿದ್ದಿದೆ. ಇನ್ನುಳಿದ ಎರಡು ಪಂದ್ಯ ಗೆದ್ದರೂ ತಂಡದ ಮೊತ್ತ 14 ಆಗಲಿದೆ. ಲಕ್ನೋ ಸೋಲಿನಿಂದ ಡೆಲ್ಲಿ ಮತ್ತು ಮುಂಬೈಗೆ ಪ್ಲೇ ಆಫ್‌ ಅವಕಾಶ ಹೆಚ್ಚಿದೆ.

ಇಲ್ಲಿನ ಏಕಾನ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಆರಂಭಿಕ ಬ್ಯಾಟರ್‌ಗಳಾದ ಮಿಚೆಲ್‌ ಮಾರ್ಷ್‌ ಮತ್ತು ಐಡೆನ್‌ ಮಾರ್ಕ್ರಮ್‌ ಅರ್ಧಶತಕದ ಪರಾಕ್ರಮದಿಂದ 7 ವಿಕೆಟ್‌ಗೆ 205 ರನ್‌ ಮೊತ್ತ ಪೇರಿಸಿತು. ಜವಾಬಿತ್ತ ಸನ್‌ರೈಸರ್ಸ್‌ ಹೈದರಾಬಾದ್‌ ದಿಟ್ಟ ರೀತಿಯ ಬ್ಯಾಟಿಂಗ್‌ ಮೂಲಕ 18.2 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 206 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಅಭಿಷೇಕ್‌ ಅರ್ಧಶತಕ

ಚೇಸಿಂಗ್‌ ವೇಳೆ ಹೈದರಾಬಾದ್‌ ತಂಡಕ್ಕೆ ಎಡಗೈ ಆರಂಭಿಕ ಬ್ಯಾಟರ್‌ ಅಭಿಷೇಕ್‌ ಶರ್ಮ ಅರ್ಧಶತಕ ಬಾರಿಸುವ ಮೂಲಕ ಆಸರೆಯಾದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಒತ್ತುಕೊಟ್ಟ ಅವರು 6 ಸಿಕ್ಸರ್‌ ಮತ್ತು 4 ಬೌಂಡರಿ ಸಿಡಿಸಿ 59 ರನ್‌ ಬಾರಿಸಿದರು. ಎದುರಿಸಿದ್ದು ಕೇವಲ 20 ಎಸೆತ. ಇವರಿಗೆ ಮತ್ತೊಂದು ತುದಿಯಲ್ಲಿ ಇಶಾನ್‌ ಕಿಶನ್‌ ಕೂಡ ಉತ್ತಮ ಸಾಥ್‌ ನೀಡಿದರು. ಇಶಾನ್‌ 35 ರನ್‌ ಕೊಡುಗೆ ಸಲ್ಲಿಸಿದರು.

ನೋಟ್‌ಬುಕ್‌ ಸೆಲೆಬ್ರೇಷನ್‌ ಮಾಡಿ ಎರಡು ಬಾರಿ ದಂಡಕ್ಕೆ ಗುರಿಯಾದರೂ ದಿಗ್ವೇಶ್‌ ರಾಥಿ ಇದೇ ಸಂಭ್ರಮಾಚರಣೆಯನ್ನು ಹೈದರಾಬಾದ್‌ ಪಂದ್ಯದಲ್ಲಿಯೂ ಪುನರಾವರ್ತಿಸಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಭಿಷೇಕ್‌ ವಿಕೆಟ್‌ ಕಿತ್ತ ವೇಳೆ ಅವರು ಈ ಸಂಭ್ರಮಾಚರಣೆ ಮಾಡಿದರು. ಇದರಿಂದ ತಾಳ್ಮೆ ಕಳೆದುಕೊಂಡ ಅಭಿಷೇಕ್‌, ದಿಗ್ವೇಶ್‌ ಜತೆ ವಾಗ್ವಾದ ಕೂಡ ನಡೆಸಿದರು. ಬಳಿಕ ಅಂಪೈರ್‌ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಣ್ಣಗಾಗಿಸಿದರು.

ಕೊರೊನಾ ಪಾಸಿಟಿವ್‌ನಿಂದ ಈ ಪಂದ್ಯಕ್ಕೆ ಅಲಭ್ಯರಾದ ಟ್ರಾವಿಸ್‌ ಹೆಡ್‌ ಬದಲಿಗೆ ಆಡಲಿಳಿದ ಅಥರ್ವ ತೈಡೆ(13) ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಅಂತಿಮವಾಗಿ ಹೆನ್ರಿಚ್‌ ಕ್ಲಾಸೆನ್‌(47) ಮತ್ತು ಕಮಿಂದು ಮೆಂಡಿಸ್ 32 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮಾರ್ಷ್‌-ಮಾರ್ಕ್ರಮ್‌ ಹೋರಾಟ ವ್ಯರ್ಥ

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಲಕ್ನೋ ಪರ ಮಿಚೆಲ್‌ ಮಾರ್ಷ್‌ ಮತ್ತು ಐಡೆನ್‌ ಮಾರ್ಕ್ರಮ್‌ ಬಿರುಸಿನ ಬ್ಯಾಟಿಂಗ್‌ ಮೂಲಕ ಹೈದರಾಬಾದ್‌ ಬೌಲರ್‌ಗಳನ್ನು ಬೆಂಡೆತ್ತಿದರು. ಪವರ್‌ ಪ್ಲೇಯಲ್ಲಿ ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸಿದ ಈ ಜೋಡಿ 10 ಓವರ್‌ ಆಗುವ ಮುನ್ನೇ ವಿಕೆಟ್‌ ನಷ್ಟವಿಲ್ಲದೆ 100 ರನ್‌ ರಾಖಿ ಹಾಕಿದ್ದರು. ಈ ಜೋಡಿಯ ಅಬ್ಬರದ ಬ್ಯಾಟಿಂಗ್‌ಗೆ ಕೊನೆಗೂ ಪದಾರ್ಪಣ ಪಂದ್ಯವನ್ನಾಡಿದ ಹರ್ಷ್‌ ದುಬೆ ಬ್ರೇಕ್‌ ಹಾಕುವಲ್ಲಿ ಯಶಸ್ವಿಯಾದರು. 65 ರನ್‌ ಗಳಿಸಿದ್ದ ಮಿಚೆಲ್‌ ಮಾರ್ಷ್‌ ವಿಕೆಟ್‌ ಕಿತ್ತು ತಂಡಕ್ಕೆ ಮೊದಲ ಯಶಸ್ವಿ ತಂದುಕೊಟ್ಟರು. ಮಾರ್ಷ್‌ ಮತ್ತು ಮಾರ್ಕ್ರಮ್‌ ಜೋಡಿ ಮೊದಲ ವಿಕೆಟ್‌ಗೆ 115 ರನ್‌ ಒಟ್ಟುಗೂಡಿಸಿತು. ಮಾರ್ಷ್‌ 6 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿದರು.

ಪಂತ್‌ ಮತ್ತೆ ವಿಫಲ

ಮೆಗಾ ಹರಾಜಿನಲ್ಲಿ ದಾಖಲೆ ಮೊತ್ತ ಪಡೆದ ನಾಯಕ ರಿಷಭ್ ಪಂತ್‌ ಈ ಪಂದ್ಯದಲ್ಲಿಯೂ ಒಂದಂಕಿಗೆ ಸೀಮಿತರಾಗಿ ಮತ್ತೆ ಬ್ಯಾಟಿಂಗ್‌ ವೈಫಲ್ಯ ಕಂಡರು. ಅವರ ಈ ನಿರಾಶಾದಾಯಕ ಬ್ಯಾಟಿಂಗ್‌ ಕಂಡು ಪಂದ್ಯ ವೀಕ್ಷಿಸುತ್ತಿದ್ದ ತಂಡದ ಮಾಲಿಕ ಸಂಜೀವ್ ಗೋಯೆಂಕಾ ಕೂಡ ಬೇಸರಗೊಂಡರು. 6 ಎಸೆತಗಳಿಂದ ಕೇವಲ 7 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು. ಪಂತ್‌ ವಿಕೆಟ್‌ ಪತನದ ಬಳಿಕ ಮಾರ್ಕ್ರಮ್‌ ಜತೆ ಕೆಲ ಕಾಲ ಇನಿಂಗ್ಸ್‌ ಮುಂದುವರಿಸಿದ ನಿಕೋಲಸ್‌ ಪೂರನ್‌ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನೆರವಾದರು. ಮಾರ್ಕ್ರಮ್‌ 38 ಎಸೆತಗಳಿಂದ ತಲಾ 4 ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ 61 ರನ್‌ ಬಾರಿಸಿದರು. ಇದು ಹಾಲಿ ಆವೃತ್ತಿಯಲ್ಲಿ ಅವರ 5ನೇ ಅರ್ಧಶತಕ.

ನಿಕೋಲಸ್‌ ಪೂರನ್‌ ಬಿರುಸಿನ ಬ್ಯಾಟಿಂಗ್‌ ಮೂಲಕ 26 ಎಸೆತಗಳಲ್ಲಿ 45 ರನ್‌ ಚಚ್ಚಿದರು. ಮಾರ್ಕ್ರಮ್‌ ಮತ್ತು ಪೂರನ್‌ ವಿಕೆಟ್‌ ಬೀಳುತ್ತಿದ್ದಂತೆ ಲಕ್ನೋ ತಂಡ ನಾಟಕೀಯ ಕುಸಿತ ಕಂಡಿತು. ಆ ಬಳಿಕ ಬಂದ ಎಲ್ಲ ಬ್ಯಾಟರ್‌ಗಳು ಸಿಂಗಲ್‌ ಡಿಜಿಟ್‌ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಒಟ್ಟಾರೆ ತಂಡದ ಪರ ಮೂವರು ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಹೈದರಾಬಾದ್‌ ಪರ ಕೀಪರ್‌ ಇಶಾನ್‌ ಕಿಶನ್‌ ಎರಡು ಕ್ಯಾಚ್‌ ಮತ್ತು ಒಂದು ಸ್ಟಂಪಿಂಗ್‌ ಅವಕಾಶ ಕೈಚೆಲ್ಲಿ ಕಳಪೆ ಎನಿಸಿಕೊಂಡರು.

ಇದನ್ನೂ ಓದಿ CSK vs RR: ಚೆನ್ನೈ-ರಾಜಸ್ಥಾನ್‌ ಔಪಚಾರಿಕ ಪಂದ್ಯ

ಮಾಲಿಂಗ ದಾಖಲೆ ಮುರಿದ ಹರ್ಷಲ್‌

ಹರ್ಷಲ್‌ ಪಟೇಲ್‌ ಒಂದು ವಿಕೆಟ್‌ ಕೀಳುವ ಮೂಲಕ ಐಪಿಎಲ್‌ನಲ್ಲಿ ಅತಿ ವೇಗವಾಗಿ 150 ವಿಕೆಟ್‌ ಪೂರ್ತಿಗೊಳಿಸಿದ ಲಸಿತ್ ಮಾಲಿಂಗ ಅವರ ದಾಖಲೆ ಮುರಿದರು. ಜತೆಗೆ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್‌ ಎನಿಸಿಕೊಂಡರು. ಆದರೆ ಬೌಲಿಂಗ್‌ನಲ್ಲಿ ಹರ್ಷಲ್‌ ದುಬಾರಿಯಾದರು. 49 ರನ್‌ ಬಿಟ್ಟುಕೊಟ್ಟರು.