ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sofia Qureshi: ಕರ್ನಲ್ ಸೋಫಿಯಾ ಖುರೇಷಿ ಮನೆ ಮೇಲೆ RSS ದಾಳಿ ಎಂದು ಫೇಕ್ ಪೋಸ್ಟ್; ಕಿಡಿಗೇಡಿ ಅನೀಸ್ ಸ್ಥಳ ಪತ್ತೆ

Sofia Qureshi: ಸುಳ್ಳು ಸುದ್ದಿ ವೈರಲ್‌ ಆಗಿದ್ದರಿಂದ ಗೋಕಾಕ್ ಪೊಲೀಸರು ಕರ್ನಲ್ ಸೋಫಿಯಾ ಖುರೇಷಿ ಅವರ ಮಾವನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಭದ್ರತೆ ಒದಗಿಸಿದ್ದಾರೆ. ಸುಳ್ಳಿ ಸುದ್ದಿ ಹರಡಿದವನು ಭಾರತೀಯ ಪ್ರಜೆ ಎಂದು ಗೊತ್ತಾದರೆ, ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಸೋಫಿಯಾ ಖುರೇಷಿ ಮನೆ ಮೇಲೆ ದಾಳಿ; ಫೇಕ್ ಪೋಸ್ಟ್ ಹಾಕಿದ್ದವನ ಸ್ಥಳ ಪತ್ತೆ

Profile Prabhakara R May 14, 2025 2:52 PM

ಬೆಳಗಾವಿ: ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ (Sofia Qureshi) ಅವರ ಪತಿಯ ಬೆಳಗಾವಿಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ಮನೆ ಮೇಲೆ ಆರ್‌ಎಸ್‌ಎಸ್ ಕಾರ್ಯಕರ್ತರಿಂದ ದಾಳಿ ನಡೆದಿದೆ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಫೇಕ್ ಪೋಸ್ಟ್‌ ಮಾಡಿದವನ ಜಾಡು ಹಿಡಿದು ಬೆನ್ನು ಹತ್ತಿದ್ದ ಬೆಳಗಾವಿ ಪೊಲೀಸರಿಗೆ ಇದೀಗ ಕಿಡಿಗೇಡಿ ಎಲ್ಲಿಯವನು ಎಂಬುವುದು ಗೊತ್ತಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಅವರು, ಫೇಕ್ ಪೋಸ್ಟ್ ಮಾಡಿದ್ದ ಆರೋಪಿ ಅನೀಸ್ ಉದ್ದೀನ್, ಕೆನಡಾದ ಕೊಲಂಬಿಯಾ ನಿವಾಸಿ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

'ಎಕ್ಸ್‌ನ ವೆರಿಫೈಡ್ ಖಾತೆಯಿಂದ ಹರಡಲಾದ ಈ ಸುಳ್ಳು ಸುದ್ದಿಯನ್ನು ಬೆಳಗಾವಿ ಪೊಲೀಸರ ಸಾಮಾಜಿಕ ಜಾಲತಾಣ ತಂಡವು ಗಮನಿಸಿ, ನನ್ನ ಗಮನಕ್ಕೆ ತಂದಿದ್ದರು. ನಾನು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿ, ತಕ್ಷಣವೇ ಈ ಮಾಹಿತಿಯನ್ನು ಡಿಲೀಟ್ ಮಾಡುವಂತೆ ಸೂಚಿಸಿದ್ದೆ. ನನ್ನ ಕಾಮೆಂಟ್ ನೋಡಿದ ಆತ ಕೂಡಲೇ ಪೋಸ್ಟ್ ಡಿಲೀಟ್ ಮಾಡಿದ್ದಾನೆ ಎಂದು ಎಸ್‌ಪಿ ಗುಳೇದ್ ಹೇಳಿದ್ದಾರೆ.

ನಂತರ, ಬೆಳಗಾವಿ ಪೊಲೀಸರು ಎಕ್ಸ್‌ನ ಮುಖ್ಯ ಕಚೇರಿಗೆ ಈ ಬಗ್ಗೆ ಮಾಹಿತಿ ಕೋರಿದಾಗ, ಈ ಸುಳ್ಳು ಸುದ್ದಿಯನ್ನು ಹರಡಿದವನು ಕೊಲಂಬಿಯಾ ಪ್ರಜೆ ಅನೀಸ್ ಉದ್ದೀನ್ ಎಂಬುದು ಸಾಬೀತಾಯಿತು. ಆತ ವಿದೇಶಿ ಪ್ರಜೆ ಎಂಬ ಕಾರಣಕ್ಕೆ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿಲ್ಲ. ಆದರೆ ಎಕ್ಸ್ ಸಂಸ್ಥೆಗೆ ಈಗಾಗಲೇ ಲೀಗಲ್ ನೋಟಿಸ್ ರವಾನಿಸಲಾಗಿದೆ. ಒಂದು ವೇಳೆ ಆತ ಭಾರತೀಯ ಪ್ರಜೆ ಎಂದು ಗೊತ್ತಾದರೆ, ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಸ್ಪಿ ಗುಳೇದ್ ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯ ಬೆನ್ನಲ್ಲೇ, ಗೋಕಾಕ್ ಪೊಲೀಸರು ಕರ್ನಲ್ ಸೋಫಿಯಾ ಖುರೇಷಿ ಅವರ ಮಾವನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಭದ್ರತೆ ಒದಗಿಸಿದ್ದಾರೆ. 'ಕರ್ನಲ್ ಸೋಫಿಯಾ ಖುರೇಷಿ ಇಂದು ಭಾರತದ ಪ್ರತಿ ಮನೆಗೆ ಚಿರಪರಿಚಿತರಾಗಿದ್ದಾರೆ. ಆದ್ದರಿಂದ, ಅವರ ಕುಟುಂಬಸ್ಥರಿಗೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದರು.

ಈ ಸುದ್ದಿಯನ್ನೂ ಓದಿ | Operation Sindoor: ಆಪರೇಷನ್‌ ಸಿಂದೂರ್‌ ಬಗ್ಗೆ ಅಪಪ್ರಚಾರ- ಚೀನಾದ ಖ್ಯಾತ ಟಿವಿ ಚಾನೆಲ್‌ನ ಎಕ್ಸ್‌ ಖಾತೆ ಬ್ಲಾಕ್‌!

ಈ ಸುಳ್ಳು ಸುದ್ದಿಯನ್ನು ಖಂಡಿಸಿರುವ ಬೆಳಗಾವಿ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಜನತೆಗೆ ಮನವಿ ಮಾಡಿದ್ದಾರೆ.