Viral Video: ಆಪರೇಷನ್ ಸಿಂದೂರ್ ಹೆಸರಿನಲ್ಲಿ ದೇಶಭಕ್ತಿ ಗೀತೆ ಬಿಡುಗಡೆ ಮಾಡಿದ ಮನೋಜ್ ತಿವಾರಿ; ವಿಡಿಯೊ ನೀವೂ ನೋಡಿ
ಆಪರೇಷನ್ ಸಿಂದೂರ್‌ಗೆ ಗೌರವಾರ್ಥವಾಗಿ ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸಲು ಭೋಜ್‌ಪುರಿ ಗಾಯಕ ಮತ್ತು ದೆಹಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ 'ಆಪರೇಷನ್ ಸಿಂದೂರ್' ಹೆಸರಿನಲ್ಲಿ ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯ ಪ್ರತಿಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂದೂರ್’ ಹೆಸರಿನಲ್ಲಿ ಪ್ರತಿ ದಾಳಿ ನಡೆಸಿ ಪಾಕಿಸ್ತಾನದ ಉಗ್ರರ ಅನೇಕ ನೆಲೆಗಳನ್ನು ಧ್ವಂಸ ಮಾಡಿದೆ. ಇದೀಗ ಭಾರತೀಯ ಸೇನೆಯ ಯಶಸ್ವಿ ಕಾರ್ಯಾಚರಣೆ ಆಪರೇಷನ್ ಸಿಂದೂರ್‌ಗೆ ಗೌರವಾರ್ಥವಾಗಿ ಭೋಜ್‌ಪುರಿ ಗಾಯಕ ಮತ್ತು ದೆಹಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಬಿಜೆಪಿ ಸಂಸದ ಮನೋಜ್ ತಿವಾರಿ ಈ ಹಾಡಿಗೆ ‘ಸಿಂದೂರ್ ಕಿ ಲಾಲ್ಕಾರ್’ ಎಂದು ಶೀರ್ಷಿಕೆ ಇಟ್ಟಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಹಾಡು ವೈರಲ್ ಆಗಿದೆ. 5 ನಿಮಿಷ 25 ಸೆಕೆಂಡುಗಳ ಹಾಡಿನಲ್ಲಿ ತಿವಾರಿ ಮೂರು ಪಡೆಗಳಾದ ನೌಕಾಪಡೆ, ಸೇನೆ ಮತ್ತು ವಾಯುಪಡೆಯ ಶಕ್ತಿ, ತ್ಯಾಗ ಮತ್ತು ಹೋರಾಟವನ್ನು ಚಿತ್ರಿಸಿದ್ದಾರೆ. ಹಾಡಿನ ಪೋಸ್ಟರ್‌ನಲ್ಲಿ ಮನೋಜ್ ಸೇನಾ ಸಮವಸ್ತ್ರದಲ್ಲಿ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಮನೋಜ್ ತಿವಾರಿ ಈ ಹಾಡಿನ ಗಾಯಕ ಮಾತ್ರವಲ್ಲದೆ, ಗೀತರಚನೆಕಾರ ಮತ್ತು ಸಂಯೋಜಕರಾಗಿದ್ದಾರೆ. ಸೂರಜ್ ಬಿಸ್ವಕರ್ಮ ಸಂಗೀತ ಸಂಯೋಜಿಸಿದ್ದರೆ, ಹಾಡಿನ ಪರಿಕಲ್ಪನೆ ನೀಲಕಾಂತ್ ಬಕ್ಷಿ ಅವರದ್ದು. ಟ್ರ್ಯಾಕ್ ಅನ್ನು ಮನೋಜ್ ತಿವಾರಿ ಪತ್ನಿ ಸುರಭಿ ತಿವಾರಿ ರಚಿಸಿದ್ದಾರೆ. ಈ ಹಾಡಿನ ಸಾಹಿತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.
ಈ ಹಾಡು ರಚನೆಯ ಕಾರಣವನ್ನು ತಿಳಿಸಿದ ಮನೋಜ್ ತಿವಾರಿ, “ಸೈನ್ಯವು ಏಕಾಂಗಿಯಾಗಿ ಯುದ್ಧ ಮಾಡುವುದಿಲ್ಲ. ಅವರ ಮನೋಸ್ಥೈರ್ಯವನ್ನು ಹೆಚ್ಚಿಸಲು ದೇಶದ ಪ್ರತಿಯೊಬ್ಬ ನಾಗರಿಕನು ಅವರಿಗೆ ಶಕ್ತಿಯನ್ನು ನೀಡುತ್ತಾನೆ. ಅದು ಗೀತ ರಚನೆಕಾರರಾಗಲಿ ಅಥವಾ ಬರಹಗಾರರಾಗಲಿ, ಅವರು ತಮ್ಮ ಕವಿತೆಗಳು ಮತ್ತು ಹಾಡುಗಳ ಮೂಲಕ ಸೈನ್ಯಕ್ಕೆ ಶಕ್ತಿಯನ್ನು ನೀಡುತ್ತಾರೆ ಮತ್ತು ಇದು ಅನಾದಿ ಕಾಲದಿಂದಲೂ ನಡೆದು ಬಂದಿದೆ" ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅರ್ಜೆಂಟೀನ ಅಧ್ಯಕ್ಷರ ಮುಖಕ್ಕೆ ಮೈಕ್‌ನಿಂದ ಹಲ್ಲೆ? ವೈರಲ್ ಆದ ವಿಡಿಯೋದಲ್ಲೇನಿದೆ?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆದ ಎರಡು ವಾರಗಳ ನಂತರ, ಭಾರತವು ಉಗ್ರರ ಮೂಲನೆಲೆಗಳನ್ನು ಗುರಿಯಾಗಿಸಿಕೊಂಡ ವಾಯುದಾಳಿಗಳನ್ನು ಮಾಡಿತ್ತು. ಈ ದಾಳಿಗಳು ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗಳಿಗೆ ಸೇರಿದ ನೆಲೆಗಳನ್ನು ಗುರಿಯಾಗಿಸಿಕೊಂಡಿದ್ದವು. ಭಾರತೀಯ ವಾಯುಪಡೆಯು ಪಾಕ್‌ನ ಬಹಾವಲ್‌ಪುರದ ಮರ್ಕಜ್ ಸುಭಾನ್ ಅಲ್ಲಾ ಮತ್ತು ಮುಜಫರಾಬಾದ್‌ನ ಸೈಯದ್ನಾ ಬಿಲಾಲ್ ಶಿಬಿರ ಸೇರಿದಂತೆ ಇತರ ಪ್ರಮುಖ ತಾಣಗಳ ಮೇಲೆ ದಾಳಿ ಮಾಡಿ ಅನೇಕ ಉಗ್ರರನ್ನು ಸಂಹಾರ ಮಾಡಿದೆ.