2008ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಡೆಲ್ಲಿ ತಂಡ ಖರೀದಿಸದೆ ಇರಲು ಕಾರಣ ತಿಳಿಸಿದ ಸೆಹ್ವಾಗ್!
ಸ್ಥಳೀಯ ಬ್ಯಾಟ್ಸ್‌ಮನ್ ಆಗಿದ್ದರೂ ವಿರಾಟ್ ಕೊಹ್ಲಿಯನ್ನು 2008ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆಯ್ಕೆ ಮಾಡದೆ ಇರಲು ಕಾಋರಣವೇನೆಂದು ಡೆಲ್ಲಿ ಮಾಜಿ ನಾಯಕ ಹಾಗೂ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ವಿವರಿಸಿದ್ದಾರೆ.

ವಿರಾಟ್ ಕೊಹ್ಲಿ ಬಗ್ಗೆ ಸೆಹ್ವಾಗ್ ಹೇಳಿಕೆ.

ನವದೆಹಲಿ: ಉದ್ಘಾಟನಾ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡಕ್ಕೆ ಅಂಡರ್-19 ಆಟಗಾರರ ವಿಭಾಗಗದಿಂದ ವಿರಾಟ್ ಕೊಹ್ಲಿಯನ್ನು (Virat Kohli) ಏಕೆ ಆಯ್ಕೆ ಮಾಡಲಿಲ್ಲ ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ (Virender Sehwag) ಬಹಿರಂಗಪಡಿಸಿದ್ದಾರೆ. 2008ರ ಅಂಡರ್-19 ವಿಶ್ವಕಪ್ ಗೆದ್ದಿದ್ದ ಭಾರತ ತಂಡದ ಆಟಗಾರರನ್ನು ಎಲ್ಲಾ ತಂಡಗಳು ಒಬ್ಬರ ನಂತರ ಮತ್ತೊಬ್ಬರನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ, ಅಂದು ಡೆಲ್ಲಿ ಫ್ರಾಂಚೈಸಿ ತಮ್ಮ ಸ್ಥಳೀಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಕಡೆಗಣಿಸಿತ್ತು.
ಅಂದು ಭಾರತ ಅಂಡರ್-19 ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿಯನ್ನು ಕಡೆಗಣಿಸಿದ್ದ ಡೆಲ್ಲಿ ಫ್ರಾಂಚೈಸಿ ಪ್ರದೀಪ್ ಸಂಗ್ವನ್ ಅವರನ್ನು ಆಯ್ಕೆ ಮಾಡಿತ್ತು. ಆ ಮೂಲಕ ವಿರಾಟ್ ಕೊಹ್ಲಿಯನ್ನೇ ಡೆಲ್ಲಿ ಅಂದೇ ಕಳೆದುಕೊಂಡಿತ್ತು. ಆದರೆ, ಅಂದು ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತ್ತು. ಅಂದಿನಿಂದ ಇಲ್ಲಿಯವರೆಗೂ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಐಪಿಎಲ್ ಆಡುತ್ತಿದ್ದಾರೆ. ಆದರೆ, ಒಮ್ಮೆಯೂ ಆರ್‌ಸಿಬಿ ಪ್ರಶಸ್ತಿಯನ್ನು ಗೆದ್ದಿಲ್ಲ.
ಈ ಬಗ್ಗೆ ಇತ್ತೀಚೆಗೆ ಮಾತನಾಡಿದ ವೀರೇಂದ್ರ ಸೆಹ್ವಾಗ್, ಅಂದು ಏಕೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿಲ್ಲ ಎಂಬ ಅಂಶವನ್ನು ವೀರೇಂದ್ರ ಸೆಹ್ವಾಗ್ ಬಹಿರಂಗಪಡಿಸಿದ್ದಾರೆ. ಏಕೆಂದರೆ ಅಂದಿನ ತಂಡದಲ್ಲಿ ಅಗ್ರ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ಇದ್ದರು. ಹಾಗಾಗಿ ಡೆಲ್ಲಿಗೆ ಬೌಲರ್‌ಗಳ ಅಗತ್ಯವಿತ್ತು. ಈ ಕಾರಣದಿಂದಲೇ ಕೊಹ್ಲಿ ಬದಲು ಸಂಗ್ವನ್ ಅವರನ್ನು ಖರೀದಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
IPL 2025: ʻಲಂಡನ್‌ನಲ್ಲಿ ಸರ್ಜರಿ ಮಾಡಿಸಿಕೊಂಡೆʼ-ಆರ್‌ಸಿಬಿಗೆ ಧನ್ಯವಾದ ತಿಳಿಸಿದ ಸುಯಶ್ ಶರ್ಮಾ!
"ನಾನು ನಾಯಕನಾಗಿದ್ದಾಗ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿರಲಿಲ್ಲ ಹಾಗೂ ಇವರ ಬದಲು ಪ್ರದೀಪ್ ಸಂಗ್ವನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದೆವು. ಏಕೆಂದರೆ ಮೆಗಾ ಹರಾಜಿನಲ್ಲಿ ಅವರ ಹೆಸರು ಇರಲಿಲ್ಲ. ನಮಗೆ ಆಗಲೇ ಗೌತಮ್ ಗಂಭೀರ್, ಶಿಖರ್ ಧವನ್, ತಿಲಕ್ ರತ್ನೆ ದಿಲ್ಷಾನ್ ಇದ್ದರು. ಆಗ ನಮ್ಮಲ್ಲಿ ಸಾಕಷ್ಟು ಅಗ್ರ ದರ್ಜೆಯ ಬ್ಯಾಟ್ಸ್‌ಮನ್‌ಗಳು ನಮಗೆ ಇದ್ದರು. ಎಬಿ ಡಿ ವಿಲಿಯರ್ಸ್ ಕೂಡ ಇದ್ದರು. ಸಾಕಷ್ಟು ಬ್ಯಾಟ್ಸ್‌ಮನ್‌ಗಳು ನಮಗೆ ಇದ್ದರು, ಆದರೆ, ನಮಗೆ ಆಗ ಬೌಲರ್‌ಗಳ ಕೊರತೆ ಇತ್ತು. ಹಾಗಾಗಿ ಹರಾಜಿನಲ್ಲಿ ಬೌಲರ್ ಅನ್ನು ಆಯ್ಕೆ ಮಾಡಲು ನಾವು ಬಯಸಿದ್ದೆವು ಹಾಗೂ ಒಬ್ಬರು ಎಡಗೈ ಬೌಲರ್ ಸಿಕ್ಕರೆ ಒಳ್ಳೆಯದು ಎಂದು ನಾವು ಭಾವಿಸಿದ್ದೆವು. ಆ ಸಮಯದಲ್ಲಿ ನಾವು ಮಹೇಶ್ ಹಾಗೂ ಪ್ರದೀಪ್ ಸಂಗ್ವನ್ ಅವರನ್ನು ಆರಿಸಿದ್ದು ಒಳ್ಳೆಯ ಆಯ್ಕೆಯಾಗಿತ್ತು. ಆರಂಭಿಕ ಮೂರು ವರ್ಷಗಳಲ್ಲಿ ನಾವು ಈ ಯುವ ಬೌಲರ್‌ಗಳನ್ನು ಆಡಿದ್ದೆವು," ಎಂದು ಕ್ರಿಕ್‌ಬಝ್‌ಗೆ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.
ಪ್ರದೀಸ್ ಸಂಗ್ವನ್ ಅವರು 2008ರಲ್ಲ ಆಡಿದ್ದ 7 ಇನಿಂಗ್ಸ್‌ಗಳಿಂದ 5 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ, ಇದರ ಮುಂದಿನ ಆವೃತ್ತಿಯಲ್ಲಿ ಅವರು 13 ಇನಿಂಗ್ಸ್‌ಗಳಿಂದ 15 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತ್ಯಂತ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಿದ್ದರು. ಆ ಮೂಲಕ ಈ ಸೀಸನ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಸೆಮಿಫೈನಲ್‌ಗೆ ಪ್ರವೇಶ ಮಾಡಿತ್ತು. ಡೆಲ್ಲಿ ಪರ ಮೂರು ಆವೃತ್ತಿಗಳನ್ನು ಆಡಿದ್ದ ಸಂಗ್ವನ್ ಒಟ್ಟು 29 ವಿಕೆಟ್‌ಗಳನ್ನು ಕಬಳಿಸಿದ್ದರು.
IPL 2025: ಐಪಿಎಲ್ ಟೂರ್ನಿಯಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಔಟ್, ಪಂಜಾಬ್ ಕಿಂಗ್ಸ್‌ಗೆ ಭಾರಿ ಹಿನ್ನಡೆ!
ಮತ್ತೊಂದೆಡೆ ವಿರಾಟ್ ಕೊಹ್ಲಿ ಅವರು ತಮ್ಮ ತವರು ನಗರಿ ಡೆಲ್ಲಿಯಾಗಿದ್ದರೂ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇಲ್ಲಿಯವರೆಗೂ ಆಡುವ ಮೂಲಕ ದಂತಕತೆಯಾಗಿ ಮಾರ್ಪಟ್ಟಿದ್ದಾರೆ. ಅವರು ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿ ಬದಲಾಗಿದ್ದಾರೆ. ಐಪಿಎಲ್ ಆರಂಭವಾಗಿ ಇಲ್ಲಿಯವರೆಗೂ ಏಕೈಕ ತಂಡದ ಪರ ಪ್ರತಿಯೊಂದು ಆವೃತ್ತಿಯನ್ನು ಆಡಿದ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ.