Bengaluru Rain: ಬೆಂಗಳೂರಿನಲ್ಲಿ ಮಳೆ ಅಬ್ಬರ; ಮರ ಬಿದ್ದು ಆಟೋ ಚಾಲಕ ಸ್ಥಳದಲ್ಲೇ ಸಾವು
ಬೆಂಗಳೂರು ನಗರದ ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಶೇಷಾದ್ರಿಪುರಂ, ವಿಧಾನಸೌಧ, ಕೆ.ಆರ್. ಸರ್ಕಲ್, ಕೆ.ಆರ್.ಮಾರ್ಕೆಟ್, ಟೌನ್ ಹಾಲ್, ಮಲ್ಲೇಶ್ವರ, ಯಶವಂತಪುರ, ಕಾರ್ಪೋರೇಷನ್ ಸರ್ಕಲ್ ಸೇರಿ ಹಲವೆಡೆ ಗುರುವಾರ ರಾತ್ರಿ ಮಳೆ ಅಬ್ಬರಿಸಿದೆ.


ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಗುಡುಗು ಸಹಿತ ಮಳೆ ಅಬ್ಬರಿಸಿದ್ದು, ಹಲೆವೆಡೆ ಭಾರಿ ಅವಾಂತರ ಸೃಷ್ಟಿಯಾಗಿದೆ. ಇನ್ನು ನಗರದ ಕತ್ರಿಗುಪ್ಪೆಯ ಎಂಎಂ ಬಾರ್ ಬಳಿ ಆಟೋ ಮೇಲೆ ಮರ ಬಿದ್ದು ಇಟ್ಟುಮಡು ನಿವಾಸಿ, ಚಾಲಕ ಮಹೇಶ್(45) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನಗರದ ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಶೇಷಾದ್ರಿಪುರಂ, ವಿಧಾನಸೌಧ, ಕೆ.ಆರ್. ಸರ್ಕಲ್, ಕೆ.ಆರ್.ಮಾರ್ಕೆಟ್, ಟೌನ್ ಹಾಲ್, ಮಲ್ಲೇಶ್ವರ, ಯಶವಂತಪುರ, ಕಾರ್ಪೋರೇಷನ್ ಸರ್ಕಲ್, ಬಸವೇಶ್ವರ ನಗರ, ರಾಜಾಜಿನಗರ, ವಿಜಯ ನಗರ, ಕೋರಮಂಗಲ, ಶಾಂತಿನಗರ, ರಿಚ್‌ಮಂಡ್ ಟೌನ್ ಸೇರಿ ವಿವಿಧ ಭಾಗಗಳಲ್ಲಿ ಬಿರುಸಿನ ಮಳೆ ಸುರಿದಿದ್ದು, ಪ್ರಮುಖ ರಸ್ತೆಗಳು ಜಲಾವೃತವಾಗಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿದೆ.

ಈ ಸುದ್ದಿಯನ್ನೂ ಓದಿ | Tumkur News: ತುಮಕೂರಿನಲ್ಲಿ 4 ಅಡಿ ಉದ್ದದ ಕೊಳಕುಮಂಡಲ, 43 ಮರಿಗಳ ರಕ್ಷಣೆ!
ಇನ್ನು ಹಲವೆಡೆ ರಸ್ತೆಗಳಲ್ಲಿ ಭಾರಿ ಪ್ರಮಾಣದದಲ್ಲಿ ನೀರು ನಿಂತಿದ್ದರಿಂದ ನಗರದ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ಜ್ಞಾನಭಾರತಿ ಹತ್ತಿರ ರಸ್ತೆಯಲ್ಲಿ ಆರ್‌ಆರ್‌ನಗರ ಕಡೆಗೆ ನಿಧಾನಗತಿಯ ಸಂಚಾರವಿತ್ತು. ತಾವರೆಕೆರೆ ಹತ್ತಿರ ಮರ ಬಿದ್ದಿರುವುದರಿಂದ ನಿಮಾನ್ಸ್ ಆಸ್ಪತ್ರೆ ಕಡೆಗೆ ನಿಧಾನಗತಿಯ ಸಂಚಾರವಿತ್ತು.

ಹೆಬ್ಬಾಳ ಪೊಲೀಸ್ ಠಾಣೆಯಿಂದ ವಿಮಾನ ನಿಲ್ದಾಣದ ಕಡೆಗೆ, ಆರ್‌ಪಿ ರಸ್ತೆಯಿಂದ ಪಿಜಿ ಹಳ್ಳಿ ಕಡೆಗೆ, ವರ್ತೂರು ಕಡೆಯಿಂದ ಗುಂಜೂರು ಕಡೆಗೆ, ಭಾಷ್ಯಂ ವೃತ್ತದಿಂದ ಕಾವೇರಿ ಕಡೆಗೆ, ಉದಯ ಟಿವಿ ಜಂಕ್ಷನ್ ಕಡೆಯಿಂದ ಜಯಮಹಲ್ ರಸ್ತೆ ಕಡೆಗೆ, ಬಿಳೇಕಹಳ್ಳಿಯಿಂದ ಜೆ ಡಿ ಮರದ ಕಡೆಗೆ, ವೀರಸಂದ್ರ ಎರಡೂ ಬದಿ ರಸ್ತೆ, ಹೊಸ ರಸ್ತೆಯಿಂದ ಬಸಾಪುರ ಜಂಕ್ಷನ್ ಕಡೆಗೆ, ಹೊರಮಾವು ಕೆಳಸೇತುವೆಯಿಂದ ಕೆ.ಆರ್ ಪುರ ಕಡೆಗೆ ಭಾರಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ವಾಹನ ಸವಾರರು ಪರದಾಡಿದರು.


ಮುಂದಿನ 4 ದಿನ ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ಹಲೆವೆಡೆ ಬೇಸಿಗೆಯ ನಡುವೆ ವರುಣ ಆರ್ಭಟಿಸುತ್ತಿದ್ದಾನೆ. ಅದೇ ರೀತಿ ಮುಂದಿನ ನಾಲ್ಕು ದಿನಗಳ ಕಾಲ ಮಳೆರಾಯ ( Heavy Rain) ಅಬ್ಬರಿಸುವ ಸಾಧ್ಯತೆ ಇದೆ. ಹೀಗಾಗಿ ಹವಾಮಾನ ಇಲಾಖೆಯು ಉತ್ತರ ಒಳನಾಡಿಗೆ ಆರೆಂಜ್ ಅಲರ್ಟ್ ಹಾಗೂ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ (Karnataka Rains) ಸಾಧ್ಯತೆಯಿದೆ.
ಇನ್ನು ಮೇ 2ರಂದು ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಹಾವೇರಿ, ಧಾರವಾಡ, ಗದಗ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆ ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳ ಕೆಲ ಸ್ಥಳಗಳಲ್ಲಿ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಇಲಾಖೆ ತಿಳಿಸಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಬಿರುಗಾಳಿಯೊಂದಿಗೆ (ಗಂಟೆಗೆ 40-50 ಕಿ.ಮೀ) ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 34°C ಮತ್ತು 21°C ಇರುವ ಸಾಧ್ಯತೆ ಇದೆ.