ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಈ ವರ್ಷ ಗೋಧಿ ಖರೀದಿ ಶೇ.24ರಷ್ಟು ಹೆಚ್ಚಳ, ಈವರೆಗೆ 256 ಲಕ್ಷ ಮೆಟ್ರಿಕ್ ಟನ್ ಸಂಗ್ರಹ: ಜೋಶಿ

Pralhad Joshi: ವಿವಿಧ ರಾಜ್ಯಗಳಿಂದ ಈ ಬಾರಿ ಏಪ್ರಿಲ್ 30ರವರೆಗೆ ಒಟ್ಟಾರೆ 256.31 ಎಲ್‌ಎಂಟಿ ಗೋಧಿಯನ್ನು ಸಂಗ್ರಹಿಸಲಾಗಿದೆ. ಕಳೆದ ವರ್ಷ ಈ ಅವಧಿಗೆ 205.41 ಎಲ್‌ಎಂಟಿ ಸಂಗ್ರಹಿಸಿತ್ತು. ಪ್ರಸ್ತುತ ಗೋಧಿ ಸಂಗ್ರಹ ಕಳೆದ ವರ್ಷಕ್ಕಿಂತ ಶೇ.24.78ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಗೋಧಿ ಖರೀದಿ ಶೇ.24.78ರಷ್ಟು ಹೆಚ್ಚಳ: ಪ್ರಲ್ಹಾದ್‌ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy May 1, 2025 7:30 PM

ನವದೆಹಲಿ: ಕೇಂದ್ರ ಸರ್ಕಾರ ಪ್ರಸ್ತುತ 256 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಗೋಧಿ ಸಂಗ್ರಹಿಸಿದ್ದು, ಪ್ರಸಕ್ತ ವರ್ಷ, ಗೋಧಿ ಖರೀದಿಯಲ್ಲಿ ಶೇ.24.78ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ಗೋಧಿ ಬೆಳೆಯುವ ದೇಶದ 5 ಪ್ರಮುಖ ರಾಜ್ಯಗಳಾದ ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಿಂದ ಗೋಧಿ ಹರಿವು ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಗೋಧಿ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಿವಿಧ ರಾಜ್ಯಗಳಿಂದ ಈ ಬಾರಿ ಏಪ್ರಿಲ್ 30ರವರೆಗೆ ಒಟ್ಟಾರೆ 256.31 ಲಕ್ಷ ಮೆಟ್ರಿಕ್ ಟನ್‌ (LMT) ಗೋಧಿಯನ್ನು ಸಂಗ್ರಹಿಸಲಾಗಿದೆ. ಕಳೆದ ವರ್ಷ ಈ ಅವಧಿಗೆ 205.41 LMT ಸಂಗ್ರಹಿಸಿತ್ತು. ಪ್ರಸ್ತುತ ಗೋಧಿ ಸಂಗ್ರಹ ಕಳೆದ ವರ್ಷಕ್ಕಿಂತ ಶೇ.24.78ರಷ್ಟು ಹೆಚ್ಚಳವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

312 LMT ಗೋಧಿ ಖರೀದಿ ಗುರಿ

ಪ್ರಸಕ್ತ ವರ್ಷ ಸುಮಾರು 312 LMT ಗೋಧಿ ಖರೀದಿ ಗುರಿ ಹೊಂದಿದ್ದು, ಈವರೆಗೆ 256.31 LMT ಗೋಧಿ ಖರೀದಿಸಲಾಗಿದೆ. ದೇಶದಲ್ಲಿ ಹೆಚ್ಚಿನ ಗೋಧಿ ಹರಿವಿರುವ ರಾಜ್ಯಗಳಲ್ಲಿ ಬೆಂಬಲ ಬೆಲೆಯಲ್ಲಿ ಗೋಧಿ ಖರೀದಿ ಸುಗಮವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಗೋಧಿ ಸಂಗ್ರಹಕ್ಕೆ ಪ್ರಮುಖ ಕೊಡುಗೆ ನೀಡಿವೆ ಎಂದು ತಿಳಿಸಿದ್ದಾರೆ.

ಎಲ್ಲೆಲ್ಲಿ, ಎಷ್ಟೆಷ್ಟು ಖರೀದಿ

ಪಂಜಾಬ್‌ನಿಂದ ಅತಿ ಹೆಚ್ಚು 103.89 ಲಕ್ಷ ಮೆಟ್ರಿಕ್‌ ಟನ್‌ ಗೋಧಿ ಖರೀದಿಸಿದ್ದರೆ, ಹರಿಯಾಣದಿಂದ 65.67 ಎಲ್‌ಎಂಟಿ, ಮಧ್ಯಪ್ರದೇಶದಿಂದ 67.57 ಎಲ್‌ಎಂಟಿ, ರಾಜಸ್ಥಾನದಿಂದ 11.44 ಎಲ್‌ಎಂಟಿ ಹಾಗೂ ಉತ್ತರ ಪ್ರದೇಶದಿಂದ 7.55 ಎಲ್‌ಎಂಟಿ ಗೋಧಿಯನ್ನು ಸದ್ಯ ಖರೀದಿಸಲಾಗಿದೆ. 2025-26ನೇ ಸಾಲಿನ ಗೋಧಿ ಖರೀದಿ ಅವಧಿ ಇನ್ನೂ ಸಾಕಷ್ಟಿದ್ದು, ಕೇಂದ್ರೀಯ ಗೋಧಿ ಸಂಗ್ರಹಣಾ ನಿಧಿಯಿಂದ ಗಣನೀಯ ಪ್ರಮಾಣದಲ್ಲಿ ಗೋಧಿ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

₹ 62,155 ಕೋಟಿ ಬೆಂಬಲ ಬೆಲೆ

2025-26ರ ಆರ್‌ಎಂಎಸ್ ಅವಧಿಯಲ್ಲಿ ದೇಶದ 21.03 ಲಕ್ಷ ಗೋಧಿ ಬೆಳೆಗಾರರು ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಾರೆ. ಈ ರೈತರಿಗೆ ₹62155.96 ಕೋಟಿ ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿದೆ. ರೈತರಿಂದ ಗೋಧಿ ಖರೀದಿಸಿದ 24ರಿಂದ 48 ಗಂಟೆಗಳಲ್ಲಿ MSP ಪಾವತಿ ಮಾಡಲಾಗುತ್ತಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Pralhad Joshi: ಬೆಂಗಳೂರು-ಬೆಳಗಾವಿ ಮಧ್ಯೆ ʼವಂದೇ ಭಾರತ್ʼ ರೈಲು; ಪ್ರಲ್ಹಾದ್‌ ಜೋಶಿ ಮನವಿಗೆ ಕೇಂದ್ರದಿಂದ ಸ್ಪಂದನೆ

ಈ ವರ್ಷ ದೇಶಾದ್ಯಂತ ಹೆಚ್ಚಿನ ಗೋಧಿ ಸಂಗ್ರಹಣೆಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕ್ರಮ ಕೈಗೊಂಡಿದ್ದು, ಗೋಧಿ ದಾಸ್ತಾನು ಪೋರ್ಟಲ್ ಮೂಲಕ ದಾಸ್ತಾನು ಮಿತಿ ಕಡ್ಡಾಯ, ಸಕಾಲಿಕ ಅನುಮೋದನೆ, FAQ ಮಾನದಂಡಗಳು ಮತ್ತು ಸಕಾಲಿಕವಾಗಿ ಅಧಿಕಾರಿಗಳ ಕ್ಷೇತ್ರ ಭೇಟಿಗೆ ಅವಕಾಶ ಕಲ್ಪಿಸಿದ್ದರಿಂದ ಹೆಚ್ಚಿನ ಪ್ರಮಾಣದ ಗೋಧಿ ಸಂಗ್ರಹ ಸಾಧ್ಯವಾಗಿದೆ ಹಾಗೂ ರೈತರಿಗೂ ಅನುಕೂಲವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.