ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಪಾಕಿಸ್ತಾನದ ಕ್ಷಿಪಣಿ-ಡ್ರೋನ್ ದಾಳಿಗೆ ರಷ್ಯಾ, ಇಸ್ರೇಲ್ ಶಸ್ತ್ರಾಸ್ತ್ರಗಳಿಂದ ತಿರುಗೇಟು ಕೊಟ್ಟ ಭಾರತ

India-Pak Tensions: ಭಾರತೀಯ ಸೇನೆಯು ರಷ್ಯಾದ ಎಸ್-400 ಟ್ರಿಯಂಫ್ ವಾಯು ರಕ್ಷಣಾ ವ್ಯವಸ್ಥೆ, ಸ್ವದೇಶಿ ಆಕಾಶ್ ಸರ್ಫೇಸ್-ಟು-ಏರ್ ಕ್ಷಿಪಣಿಗಳು, ವಿವಿಧ ಡ್ರೋನ್-ವಿರೋಧಿ ವ್ಯವಸ್ಥೆಗಳು ಮತ್ತು ರಾಡಾರ್‌ಗಳು, ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್‌ಗಳ ಜಾಲದ ಮೂಲಕ ದಾಳಿಗಳನ್ನು ಗುರುತಿಸಿ, ಟ್ರ್ಯಾಕ್ ಮಾಡಿ ತಕ್ಷಣವೇ ತಡೆಗಟ್ಟಿತು. ಇಸ್ರೇಲ್‌ನಿಂದ ಖರೀದಿಸಿದ ಹಾರೋಪ್ ಕಾಮಿಕೇಜ್ ಡ್ರೋನ್‌ಗಳನ್ನು ಪಾಕಿಸ್ತಾನದ ವಾಯು ರಕ್ಷಣಾ ಜಾಲವನ್ನು ಗುರಿಯಾಗಿಸಲು ಬಳಸಲಾಯಿತು.

ಪಾಕಿಸ್ತಾನಕ್ಕೆ ಇಸ್ರೇಲ್ ಶಸ್ತ್ರಾಸ್ತ್ರಗಳಿಂದ ತಿರುಗೇಟು ಕೊಟ್ಟ ಭಾರತ

Profile Sushmitha Jain May 9, 2025 1:00 PM

ನವದೆಹಲಿ: ಭಾರತೀಯ ಸೇನೆಯು (Indian Army) ಗುರುವಾರ ರಷ್ಯಾ (Russia) ಮತ್ತು ಇಸ್ರೇಲ್‌ನಿಂದ (Israel) ಖರೀದಿಸಿದ ಶಸ್ತ್ರಾಸ್ತ್ರಗಳ ಜೊತೆಗೆ ಸ್ವದೇಶಿ ತಂತ್ರಜ್ಞಾನದ ವ್ಯವಸ್ಥೆಗಳನ್ನು ಬಳಸಿ, ಪಾಕಿಸ್ತಾನದಿಂದ ಭಾರತೀಯ ಸೇನೆ ಮತ್ತು ವಾಯುಪಡೆ ನೆಲೆಗಳ ಮೇಲೆ ದಾಳಿ ಮಾಡಿದ ಕ್ಷಿಪಣಿಗಳು (Missiles) ಮತ್ತು ಡ್ರೋನ್‌ಗಳನ್ನು (Drones) ಯಶಸ್ವಿಯಾಗಿ ಧ್ವಂಸಗೊಳಿಸಿತು.

ಪಾಕಿಸ್ತಾನದ ದಾಳಿಯು ಎರಡು ಹಂತಗಳಲ್ಲಿ ನಡೆಯಿತು. ಮೊದಲ ಹಂತವು ಮೇ 7 ಮತ್ತು 8ರ ರಾತ್ರಿಯಲ್ಲಿ, ಎರಡನೇ ಹಂತವು ಮೇ 8ರ ಸಂಜೆ ನಡೆಯಿತು. ಮೊದಲ ದಾಳಿಯು ಭಾರತದ ಉತ್ತರ ಮತ್ತು ಪಶ್ಚಿಮ ಭಾಗದ 15 ನಗರಗಳನ್ನು ಗುರಿಯಾಗಿಸಿತ್ತು. ಎರಡನೇ ದಾಳಿಯು ಜಮ್ಮು, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಇತರ ಭಾಗಗಳು ಹಾಗೂ ಪಂಜಾಬ್ ಮತ್ತು ರಾಜಸ್ಥಾನದ ಗಡಿ ಜಿಲ್ಲೆಗಳ ಮೇಲೆ ಕೇಂದ್ರೀಕರಿಸಿತ್ತು. ಮೊದಲ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ಲಾಹೋರ್ ಸೇರಿದಂತೆ ಸೇನಾ ಗುರಿಗಳ ಮೇಲೆ ಪ್ರತಿದಾಳಿ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡನೇ ದಾಳಿಗೆ ಮೇ 8ರ ರಾತ್ರಿ ಅಥವಾ ಮೇ 9ರ ಬೆಳಗ್ಗೆ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ.

ಭಾರತೀಯ ಸೇನೆಯು ರಷ್ಯಾದ ಎಸ್-400 ಟ್ರಿಯಂಫ್ ವಾಯು ರಕ್ಷಣಾ ವ್ಯವಸ್ಥೆ, ಸ್ವದೇಶಿ ಆಕಾಶ್ ಸರ್ಫೇಸ್-ಟು-ಏರ್ ಕ್ಷಿಪಣಿಗಳು, ವಿವಿಧ ಡ್ರೋನ್-ವಿರೋಧಿ ವ್ಯವಸ್ಥೆಗಳು ಮತ್ತು ರಾಡಾರ್‌ಗಳು, ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್‌ಗಳ ಜಾಲದ ಮೂಲಕ ದಾಳಿಗಳನ್ನು ಗುರುತಿಸಿ, ಟ್ರ್ಯಾಕ್ ಮಾಡಿ ತಕ್ಷಣವೇ ತಡೆಗಟ್ಟಿತು. ಇಸ್ರೇಲ್‌ನಿಂದ ಖರೀದಿಸಿದ ಹಾರೋಪ್ ಕಾಮಿಕೇಜ್ ಡ್ರೋನ್‌ಗಳನ್ನು ಪಾಕಿಸ್ತಾನದ ವಾಯು ರಕ್ಷಣಾ ಜಾಲವನ್ನು ಗುರಿಯಾಗಿಸಲು ಬಳಸಲಾಯಿತು.

ಈ ಸುದ್ದಿಯನ್ನೂ ಓದಿ: Operation Sindoor: LOC ಬಳಿ ಪಾಕ್‌ ಸೇನಾ ನೆಲೆ ಧ್ವಂಸ; ಮೊದಲ ದೃಶ್ಯ ಹಂಚಿಕೊಂಡ ಸೇನೆ

ಭಾರತವು 2018ರ ಅಕ್ಟೋಬರ್‌ನಲ್ಲಿ ₹39,000 ಕೋಟಿ ವೆಚ್ಚದಲ್ಲಿ ರಷ್ಯಾದಿಂದ ಐದು ಎಸ್-400 ಕ್ಷಿಪಣಿ ಘಟಕಗಳನ್ನು ಖರೀದಿಸಿತ್ತು. ಈ ವ್ಯವಸ್ಥೆಯು 400 ಕಿ.ಮೀ. ವ್ಯಾಪ್ತಿಯಲ್ಲಿ ಶತ್ರು ಯುದ್ಧವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಧ್ವಂಸಗೊಳಿಸಬಲ್ಲದು. ಈಗಾಗಲೇ ಮೂರು ಘಟಕಗಳನ್ನು ಸ್ಥಾಪಿಸಲಾಗಿದ್ದು, ಉಕ್ರೇನ್ ಯುದ್ಧದಿಂದ ರಷ್ಯಾದಲ್ಲಿ ವಿಳಂಬವಾಗಿರುವ ಎರಡು ಘಟಕಗಳು ಇನ್ನೂ ಬಂದಿಲ್ಲ.

ಆಕಾಶ್ ಕ್ಷಿಪಣಿ ವ್ಯವಸ್ಥೆಯು ಕಡಿಮೆ ರಾಡಾರ್ ಕ್ರಾಸ್-ಸೆಕ್ಷನ್ ಹೊಂದಿರುವ, ತೀವ್ರ ಚಲನಶೀಲ ವೈಮಾನಿಕ ಗುರಿಗಳನ್ನು ತಡೆಗಟ್ಟಬಲ್ಲದು. ಇದನ್ನೂ ದಾಳಿಗಳನ್ನು ತಡೆಗಟ್ಟಲು ಬಳಸಲಾಯಿತು. ಪಾಕಿಸ್ತಾನದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಸಂಯೋಜಿತ ಡ್ರೋನ್-ವಿರೋಧಿ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ತಟಸ್ಥಗೊಳಿಸಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಗುರುವಾರ ಬೆಳಗ್ಗೆ ಭಾರತೀಯ ಸೇನೆಯು ಹಾರೋಪ್ ಕಾಮಿಕೇಜ್ ಡ್ರೋನ್‌ಗಳನ್ನು ಬಳಸಿ ಪಾಕಿಸ್ತಾನದ ಹಲವು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿತು. ಈ ಡ್ರೋನ್‌ಗಳು ಗಂಟೆಗಟ್ಟಲೇ ಕಾರ್ಯನಿರ್ವಹಿಸಬಲ್ಲವು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು, ಕಮಾಂಡ್ ಪೋಸ್ಟ್‌ಗಳು, ಶಸ್ತ್ರಾಸ್ತ್ರ ಡಿಪೋಗಳನ್ನು ಗುರಿಯಾಗಿಸಬಲ್ಲವು. "ಲಾಹೋರ್‌ನ ಒಂದು ವಾಯು ರಕ್ಷಣಾ ವ್ಯವಸ್ಥೆಯನ್ನು ತಟಸ್ಥಗೊಳಿಸಲಾಗಿದೆ" ಎಂದು ರಕ್ಷಣಾ ಸಚಿವಾಲಯ ದೃಢಪಡಿಸಿದೆ.

ಪಾಕಿಸ್ತಾನದ ಉದ್ವಿಗ್ನತೆಯನ್ನು ಭಾರತ ಸಮಾನ ತೀವ್ರತೆಯಿಂದ ತಡೆಗಟ್ಟಿದೆ ಎಂದು ಸಚಿವಾಲಯ ಹೇಳಿದೆ. ಮೇ 7ರ ರಾತ್ರಿ ಪಾಕಿಸ್ತಾನ ಗುರಿಯಾಗಿಸಿದ ನಗರಗಳಲ್ಲಿ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪೂರ್ಥಲಾ, ಜಲಂಧರ್, ಲುಧಿಯಾನಾ, ಆದಂಪುರ, ಬಠಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿವೆ. ಈ ನಗರಗಳಲ್ಲಿ ಯುದ್ಧವಿಮಾನಗಳು, ಸೇನಾ ಸಾರಿಗೆ ವಿಮಾನಗಳು ಮತ್ತು ಸೇನಾ ಸೌಲಭ್ಯಗಳಿವೆ.

ಬುಧವಾರ ಭಾರತವು 'ಆಪರೇಷನ್ ಸಿಂಧೂರ್’ ಅನ್ನು ಆರಂಭಿಸಿ, ಪಾಕಿಸ್ತಾನ ಮತ್ತು PoKಯ 9 ಭಯೋತ್ಪಾದಕ ಶಿಬಿರಗಳ ಮೇಲೆ ನಿಖರ ದಾಳಿಗಳನ್ನು ನಡೆಸಿತು. ಈ ಕಾರ್ಯಾಚರಣೆಯು ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿತ್ತು. ದಾಳಿಗೆ ಸ್ಕಾಲ್ಪ್ ಕ್ರೂಸ್ ಕ್ಷಿಪಣಿಗಳು, ಹ್ಯಾಮರ್ ಸ್ಮಾರ್ಟ್ ಶಸ್ತ್ರಾಸ್ತ್ರ ವ್ಯವಸ್ಥೆ, ಗೈಡೆಡ್ ಬಾಂಬ್ ಕಿಟ್‌ಗಳು, ಎಂ777 ಹೊವಿಟ್ಜರ್‌ಗಳಿಂದ ಎಕ್ಸ್‌ಕ್ಯಾಲಿಬರ್ ಶೆಲ್‌ಗಳು ಮತ್ತು ಕಾಮಿಕೇಜ್ ಡ್ರೋನ್‌ಗಳನ್ನು ಬಳಸಲಾಗಿತ್ತು.