Himanshi Narwal: ಮುಸ್ಲಿಮರನ್ನೇ ಟಾರ್ಗೆಟ್ ಮಾಡಬೇಡಿ; ಪಹಲ್ಗಾಮ್ ದಾಳಿಯ ಸಂತ್ರಸ್ತೆ ಹಿಮಾಂಶಿ ಮನವಿ
Pahalgam Attack: ಪಹಲ್ಗಾಮ್ ಘಟನೆಯ ಹಿನ್ನೆಲೆಯಲ್ಲಿ ಮುಸ್ಲಿಮರು ಮತ್ತು ಕಾಶ್ಮೀರಿಗಳನ್ನು ಗುರಿಯಾಗಿಸಿಕೊಂಡು ದ್ವೇಷ ಹರಡುವುದು ಸರಿಯಲ್ಲ ಎಂದು ಹಿಮಾಂಶಿ ನರ್ವಾಲ್ ಹೇಳಿದ್ದಾರೆ. ಏ. 22ರಂದು ಜಮ್ಮು ಕಾಶ್ಮೀರ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಿಮಾಂಶಿ ಅವರ ಪತಿ, ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ (27) ಕೂಡ ಮೃತಪಟ್ಟಿದ್ದರು.

ಹಿಮಾಂಶಿ.

ಚಂಡೀಗಢ: ಪಹಲ್ಗಾಮ್ ಘಟನೆಯ (Pahalgam Attack) ಹಿನ್ನೆಲೆಯಲ್ಲಿ ಮುಸ್ಲಿಮರು ಮತ್ತು ಕಾಶ್ಮೀರಿಗಳನ್ನು ಗುರಿಯಾಗಿಸಿಕೊಂಡು ದ್ವೇಷ ಹರಡುವುದು ಸರಿಯಲ್ಲ ಎಂದು ಹಿಮಾಂಶಿ ನರ್ವಾಲ್ (Himanshi Narwal) ಹೇಳಿದ್ದಾರೆ. ಏ. 22ರಂದು ಜಮ್ಮು ಕಾಶ್ಮೀರ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಿಮಾಂಶಿ ಅವರ ಪತಿ, ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ (27) ಕೂಡ ಮೃತಪಟ್ಟಿದ್ದರು. ಮೇ 1ರಂದು ವಿನಯ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹಿಮಾಂಶಿ, ʼʼಇಡೀ ದೇಶವೇ ಅವರಿಗಾಗಿ ಪ್ರಾರ್ಥಿಸಬೇಕುʼʼ ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಅವರು ಯಾವುದೇ ಒಂದು ಧರ್ಮದ ವಿರುದ್ದ ದ್ವೇಷ ಕಾರದಂತೆ ಮನವಿ ಮಾಡಿದ್ದಾರೆ. ʼʼಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಮುಸ್ಲಿಮರು ಅಥವಾ ಕಾಶ್ಮೀರಿಗಳ ವಿರುದ್ಧ ದ್ವೇಷ ಕಾರುವುದು ಸರಿಯಲ್ಲ. ನಮಗೆ ಶಾಂತಿ ಮಾತ್ರ ಬೇಕು. ಜತೆಗೆ ನಮಗೆ ನ್ಯಾಯ ಸಿಗಬೇಕುʼʼ ಎಂದು ಆಗ್ರಹಿಸಿದ್ದಾರೆ.
ಹಿಮಾಂಶಿ ಹೇಳಿದ್ದೇನು? ಈ ವಿಡಿಯೊ ನೋಡಿ:
#WATCH | Karnal | "...We don't want people going against Muslims or Kashmiris. We want peace and only peace. Of course, we want justice," says Himanshi, wife of Indian Navy Lieutenant Vinay Narwal, who was killed in the Pahalgam terror attack. pic.twitter.com/LaOpBVe7z2
— ANI (@ANI) May 1, 2025
ಈ ಸುದ್ದಿಯನ್ನೂ ಓದಿ: Pahalgam Attack: ಪಹಲ್ಗಾಮ್ ದಾಳಿಯ ಉಗ್ರರು ಇನ್ನೂ ಅಲ್ಲೇ ಇದ್ದಾರೆ; ಸ್ಥಳೀಯರಿಂದ ಆಹಾರ ಸಪ್ಲೈ?
ಭಾವುಕರಾದ ವಿನಯ್ ಪತ್ನಿ, ತಾಯಿ
ವಿನಯ್ ನರ್ವಾಲ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಹುಟ್ಟೂರಾದ ಹರಿಯಾಣದ ಕರ್ನಾಲ್‌ನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಅವರ ಪತ್ನಿ ಮತ್ತು ತಾಯಿ ಭಾವುಕರಾಗಿ ಕಣ್ಣೀರು ಸುರಿಸಿದರು. ತಮ್ಮ ಪತಿಯನ್ನು ಹತ್ಯೆಗೈದ ಅಪರಾಧಿಗಳಿಗೆ ಸೂಕ್ತ ಶೀಕ್ಷೆಯಾಗಬೇಕು ಎಂದು ಇದೇ ವೇಳೆ ಹಿಮಾಂಶಿ ಆಗ್ರಹಿಸಿದ್ದಾರೆ.
ನೋವಿನ ಸಂಗತಿ ಎಂದರೆ ವಿನಯ್ ಉಗ್ರರ ಗುಂಡಿನ ದಾಳಿಗೆ ಬಲಿಯಾಗುವ ವಾರದ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಏ. 16ರಂದು ವಿನಯ್ ಹಾಗೂ ಹಿಮಾಂಶಿ ವಿವಾಹವಾಗಿತ್ತು. ಹೀಗಾಗಿ ಅವರು ಹನಿಮೂನ್‌ಗಾಗಿ ಜಮ್ಮು ಕಾಶ್ಮೀರಕ್ಕೆ ತೆರಳಿದ್ದರು. ಇಬ್ಬರು ಪಹಲ್ಗಾಮ್ ಬಳಿಯ ಬೈಸರನ್‌ನ ಕಣಿವೆಯಲ್ಲಿದ್ದಾಗ ನಡೆದ ಉಗ್ರರ ದಾಳಿಯಲ್ಲಿ ವಿನಯ್ ಬಲಿಯಾಗಿದ್ದರು.
"ಬೈಸರನ್‌ನ ಕಣಿವೆಯಲ್ಲಿ ನಾವು ಭೇಲ್‌ಪುರಿ ತಿನ್ನುತ್ತಿದ್ದಾಗ ಒಬ್ಬ ವ್ಯಕ್ತಿ ಬಂದು ವಿನಯ್ ಬಳಿ ನೀವು ಮುಸ್ಲಿಮ್ ಧರ್ಮದವರ ಎಂದು ಕೇಳಿದ್ದ. ಅವರು ಅಲ್ಲ ಎಂದಾಗ ಶೂಟ್ ಮಾಡಿ ಹತ್ಯೆಗೈದಿದ್ದʼʼ ಎಂದು ಘಟನೆಯ ಬಳಿಕ ಹಿಮಾಂಶಿ ಹೇಳಿದ್ದ ವಿಡಿಯೊ ವೈರಲ್ ಆಗಿತ್ತು.
ತನಿಖೆ ಚುರುಕುಗೊಳಿಸಿದ ಎನ್‌ಐಎ
ಉಗ್ರರ ಜಾಡು ಹಿಡಿಯಲು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ಚುರುಕಿಗೊಳಿಸಿದೆ. ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಇದಕ್ಕಾಗಿ ಎನ್‌ಐಎ ಅತ್ಯಾಧುನಿಕ ಫಾರೆನ್ಸಿಕ್ ವಿಧಾನ, ಸ್ಯಾಟಲೈಟ್ ಫೋಟೊ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಪರಿಗಣಿಸುತ್ತಿದೆ. ಇದರ ಆಧಾರದಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಉಗ್ರರು ಸ್ಥಳೀಯ ದಟ್ಟ ಕಾಡಿನಲ್ಲಿ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಹುಡುಕಾಟ ನಡೆಸಲು 3 ಡಿ ಮ್ಯಾಪಿಂಗ್ ಪ್ರಕ್ರಿಯೆಗಾಗಿ ಲಿಡಾರ್, ಡ್ರೋನ್ ಮತ್ತು ಫೋಟೋಗ್ರಾಮೆಟ್ರಿಯಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎನ್ನುವುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಲು ಭಾರತ ಮುಂದಾಗಿದೆ.