Vishwavani Editorial: ಆಗ ಎಲ್ಲಿ ಹೋಗಿತ್ತು ಕಣ್ಣೀರು?
ಪ್ರಾಣಹಾನಿ ಮತ್ತು ಸ್ವತ್ತುನಷ್ಟ ಭಾರತೀಯರಿಗೇ ಆಗಲೀ ಪಾಕಿಸ್ತಾನಿಯರಿಗೇ ಆಗಲಿ, ಅದು ನೋವಿನ ವಿಷಯವೇ. ಪಾಕ್ ಸಂಸದರು ಈಗ ಹೀಗೆ ಕಣ್ಣೀರು ಸುರಿಸುವುದನ್ನು ಬಿಟ್ಟು, ತಮ್ಮ ದೇಶಕ್ಕೆ ಇಂಥ ದೊಂದು ದುಸ್ಥಿತಿಯನ್ನು ತಂದಿತ್ತ ಪರಮೋಚ್ಚ ನಾಯಕರನ್ನು ನೇರಾನೇರ ಪ್ರಶ್ನಿಸಲಿ...


ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಕೃಪಾಪೋಷಿತ ಉಗ್ರರು ನಡೆಸಿದ ಹತ್ಯಾಕಾಂಡಕ್ಕೆ ಪ್ರತಿಯಾಗಿ ಭಾರತ ಕೈಗೊಂಡ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಗೆ ಪಾಕಿಗಳು ತತ್ತರಿಸಿದ್ದಾರೆ. ಪಾಕಿಸ್ತಾ ನದ ಒಳಗೆ ನುಗ್ಗಿ ಹೊಡೆಯುತ್ತಿರುವ ಭಾರತದ ದಾಳಿಯಿಂದ ನಮ್ಮನ್ನು ದೇವರೇ ಕಾಪಾಡಬೇಕು’ ಎಂದು ಉದ್ಗರಿಸುತ್ತಾ ಪಾಕಿಸ್ತಾನದ ಸಂಸದರೊಬ್ಬರು ಸಂಸತ್‌ನಲ್ಲೇ ಕಣ್ಣೀರಿಟ್ಟರೆಂದು ವರದಿ ಯಾಗಿದೆ. ಮತ್ತೊಬ್ಬ ಸಂಸದೆಯೂ ಭಾರತದ ಸೇನಾದಾಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿ ಜನರನ್ನು ರಕ್ಷಿಸು ವಂತೆ ಮನವಿ ಮಾಡಿದ್ದಾರಂತೆ. ಏಕಾಏಕಿ ದಾಳಿಯಾದರೆ ಹೇಗಿರುತ್ತದೆ, ಸಂತ್ರಸ್ತರ ಕಣ್ಣೀರಿನ ತೂಕ ಎಷ್ಟಿರುತ್ತದೆ ಎಂಬುದು ಪಾಕಿಗಳಿಗೆ ಈಗ ನಿಧಾನವಾಗಿ ಮನವರಿಕೆಯಾಗುತ್ತಿರು ವಂತೆ ತೋರುತ್ತಿದೆ.
ಇದನ್ನೂ ಓದಿ: Vishwavani Editorial: ಆಪರೇಷನ್ ಸಿಂದೂರ್ ದಿಟ್ಟ ನಡೆ
ಪಾಕಿಸ್ತಾನದ ತಥಾಕಥಿತ ಜನನಾಯಕರು, ಮಿಲಿಟರಿ ಅಧಿಕಾರಿಗಳು ಉಗ್ರರಿಗೆ ಚಿತಾವಣೆ ನೀಡಿ ಭಾರತದೊಳಗೆ ಅಕ್ರಮವಾಗಿ ನುಗ್ಗಿಸಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಂಚು ನಡೆಸಿದಾಗ ಇವರ‍್ಯಾರೂ ಕಣ್ಣೀರುಗರೆಯಲಿಲ್ಲ.
ಪುಲ್ವಾಮಾದಲ್ಲಿ ಆದ ಉಗ್ರರ ದಾಳಿಯಿಂದಾಗಿ ಭಾರತದ ಸೇನಾಯೋಧರು ಹುತಾತ್ಮರಾ ದಾಗ ಇವರಿಗೆ ಮಾನವ ಜೀವದ ಬಗ್ಗೆ ಆತಂಕವಾಗಲಿಲ್ಲ. ಇತ್ತೀಚೆಗೆ ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರನ್ನು ಉಗ್ರರು ಮನಬಂದಂತೆ ಹೊಡೆದುರುಳಿಸಿದಾಗ ಇವರ ಕರುಳು ಮಿಡಿಯಲಿಲ್ಲ. ಈಗ ಆಪತ್ತು ತಮ್ಮ ಕಾಲಬುಡಕ್ಕೆ ಬರುತ್ತಿದ್ದಂತೆ ಇವರೆಲ್ಲರ ಗಂಟಲು ಗಟ್ಟಿ ಗದ್ಗದಿತರಾಗುತ್ತಾರೆ. ಕಣ್ಣೀರಿನ ತೂಕವೇನು ಎಂಬುದು ಅರಿವಾಗುತ್ತದೆ. ವರ್ಷಗಳ ಹಿಂದೆ ಇದೇ ಪಾಕ್ ಬೆಂಬಲಿತ ಉಗ್ರರು ಮುಂಬೈನಲ್ಲಿ ಸರಣಿ ಸ್ಪೋಟ ನಡೆಸಿ ಜೀವಹಾನಿ, ಸ್ವತ್ತುನಷ್ಟಕ್ಕೆ ಕಾರಣರಾದರಲ್ಲ.... ಆಗ ಎಲ್ಲಿ ಹೋಗಿತ್ತು ಇವರ ಕಣ್ಣೀರು? ಭಾರತದಲ್ಲಿ ಪಾಕ್-ಕೃಪಾಪೋಷಿತ ಭಯೋತ್ಪಾದಕರು ಒಂದೊಂದು ವಿಧ್ವಂಸಕ ಕೃತ್ಯಗಳನ್ನು ಎಸಗಿದಾಗಲೂ ಒಳಗೊಳಗೇ ಸಂಭ್ರಮಿಸುತ್ತಿದ್ದವರು ಒಮ್ಮೆಯಾದರೂ, ‘ಇದು ಮಾನವೀಯತೆಯ ಮೇಲಿನ ದಾಳಿ, ಇದು ತರವಲ್ಲ’ ಎಂದು ದನಿಯೆತ್ತಿ ದ್ದುಂಟೇ? ಪ್ರಾಣಹಾನಿ ಮತ್ತು ಸ್ವತ್ತುನಷ್ಟ ಭಾರತೀಯರಿಗೇ ಆಗಲೀ ಪಾಕಿಸ್ತಾನಿಯರಿಗೇ ಆಗಲಿ, ಅದು ನೋವಿನ ವಿಷಯವೇ. ಪಾಕ್ ಸಂಸದರು ಈಗ ಹೀಗೆ ಕಣ್ಣೀರು ಸುರಿಸುವುದನ್ನು ಬಿಟ್ಟು, ತಮ್ಮ ದೇಶಕ್ಕೆ ಇಂಥದೊಂದು ದುಸ್ಥಿತಿಯನ್ನು ತಂದಿತ್ತ ಪರಮೋಚ್ಚ ನಾಯಕರನ್ನು ನೇರಾನೇರ ಪ್ರಶ್ನಿಸಲಿ...