ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK vs RR: 350 ಟಿ20 ಸಿಕ್ಸರ್‌ಗಳ ದಾಖಲೆಯ ಸನಿಹದಲ್ಲಿ ಎಂಎಸ್ ಧೋನಿ!

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್‌ ಧೋನಿ ಒಂದು ಸಿಕ್ಸರ್ ಸಿಡಿಸಿದರೆ ಟಿ20 ಕ್ರಿಕೆಟ್‌ನಲ್ಲಿ 350 ಸಿಕ್ಸರ್ ಪೂರ್ಣಗೊಳಿಸಲಿದ್ದಾರೆ. ಆ ಮೂಲಕ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್‌ ಆಗಲಿದ್ದಾರೆ.

IPL 2025: 350 ಸಿಕ್ಸರ್‌ಗಳ ದಾಖಲೆಯ ಸನಿಹದಲ್ಲಿ ಎಂಎಸ್‌ ಧೋನಿ!

350 ಟಿ20 ಸಿಕ್ಸರ್‌ಗಳ ಸನಿಹದಲ್ಲಿ ಎಂಎಸ್‌ ಧೋನಿ.

Profile Ramesh Kote May 20, 2025 5:25 PM

ಜೈಪುರ: ಮೇ 20 ರಂದು ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai super kings) ನಾಯಕ ಮಹೇಂದ್ರ ಸಿಂಗ್ 350 ಸಿಕ್ಸರ್ ಸಿಡಿಸುವ ಹಾದಿಯಲ್ಲಿದ್ದಾರೆ. ಇದುವರೆಗೂ 349 ಸಿಕ್ಸರ್ ಬಾರಿಸಿರುವ ಕೂಲ್ ಕ್ಯಾಪ್ಟನ್ ಒಂದು ಸಿಕ್ಸರ್ ಚಚ್ಚಿದರೆ, ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಹಾಗೂ ವಿಶ್ವದ 34ನೇ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ.

ಟೀಂ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಈಗಾಗಲೇ 350 ಸಿಕ್ಸರ್ ಬಾರಿಸಿ ಮೈಲುಗಲ್ಲು ನಿರ್ಮಿಸಿದ್ದಾರೆ. ಈಗ ಈ ಸಾಲಿಗೆ ಸೇರಲು ಮಹೇಂದ್ರ ಸಿಂಗ್ ಧೋನಿಗೆ ಒಂದೇ ಒಂದು ಸಿಕ್ಸರ್ ಅಗತ್ಯವಿದೆ. ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಇದುವರೆಗೂ 403 ಟಿ20 ಪಂದ್ಯಗಳಲ್ಲಿ 135.75ರ ಸ್ಟ್ರೆಕ್ ರೇಟ್‌ನಲ್ಲಿ 7612 ರನ್ ಗಳಿಸಿದ್ದು, 349 ಸಿಕ್ಸರ್ ಬಾರಿಸಿದ್ದಾರೆ. ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ 463 ಪಂದ್ಯಗಳಲ್ಲಿ 1056 ಸಿಕ್ಸರ್ ನೆರವಿನಿಂದ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.

IPL 2025: 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಪರೂಪದ ದಾಖಲೆ ಬರೆದ ಅಭಿಷೇಕ್‌ ಶರ್ಮಾ!

ನಾಯಕರಾಗಿ ಎಡವಿರುವ ಎಂಎಸ್ ಧೋನಿ

ಐಪಿಎಲ್‌ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐದು ಬಾರಿ ಟ್ರೋಫಿ ಗೆಲ್ಲುವ ಮೂಲಕ ಯಶಸ್ವಿ ನಾಯಕರಾಗಿರುವ ಎಂ ಎಸ್ ಧೋನಿ ಪ್ರಸ್ತುತ ಟೂರ್ನಿಯಲ್ಲಿ ನಾಯಕನಾಗಿ ಅಲ್ಲದೆ ಆಟಗಾರನಾಗಿಯೂ ತಂಡಕ್ಕೆ ದೊಡ್ಡ ಕಾಣಿಕೆ ನೀಡುವಲ್ಲಿ ಎಡವಿದ್ದಾರೆ. ಋತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹಿಂದೆ ಸರಿದ ನಂತರ ತಂಡದ ಸಾರಥ್ಯ ವಹಿಸಿಕೊಂಡ ಧೋನಿ, ತಂಡವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ಎಡವಿದ್ದಾರೆ. ಅಲ್ಲದೆ ಒಂದು ಪಂದ್ಯದಲ್ಲಿ 11 ಎಸೆತಗಳಲ್ಲಿ 26* ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಧೋನಿ, ಇದುವರೆಗೂ 12 ಪಂದ್ಯಗಳಿಂದ 140.62ರ ಸ್ಟ್ರೆಕ್ ರೇಟ್ ನಲ್ಲಿ 180 ರನ್ ಬಾರಿಸಿದ್ದಾರೆ.

IPL 2025: ಐಪಿಎಲ್‌ನಿಂದ ಎಲ್‌ಎಸ್‌ಜಿ ತಂಡ ನಿರ್ಗಮನ; ಮೌನ ಮುರಿದ ಗೋಯೆಂಕಾ

ಸಿಎಸ್‌ಕೆಗೆ ರಾಯಲ್ಸ್ ಸವಾಲು

2025ರ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಶುಭಾರಂಭ ಕಂಡರೂ ನಂತರ ಸತತ ಸೋಲಿನಿಂದ ಪ್ಲೇಆಫ್ಸ್ ಅವಕಾಶ ಕೈಚೆಲ್ಲಿಕೊಂಡು ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದಿದೆ. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಗೆಲ್ಲುವ ಮೂಲಕ ಎಂಟನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ. ಐಪಿಎಲ್ ಟೂರ್ನಿಯ ಇತಿಹಾಸದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಕ್ ಟು ಬ್ಯಾಕ್ ಪ್ಲೇಆಫ್ಸ್ ಗೇರಲು ಎಡವಿರುವುದು ಇದೇ ಮೊದಲ ಬಾರಿ.