Pahalgam terror attack: ಪಹಲ್ಗಾಮ್ ದಾಳಿ ಮಾಸ್ಟರ್ ಮೈಂಡ್ ಹಫೀಜ್‌ಗೆ ಪಾಕ್ ಸರ್ಕಾರದಿಂದ ಬಿಗಿ ಭದ್ರತೆ; ಸೇನೆ, ಡ್ರೋನ್ ಕಣ್ಗಾವಲಲ್ಲಿರುವ ಉಗ್ರ
ಪಹಲ್ಗಾಮ್‌ನಲ್ಲಿ (Pahalgam terror attack) ನಡೆದ ಉಗ್ರರ ದಾಳಿಯ ಮುಖ್ಯ ರೂವಾರಿ ಎಂದು ನಂಬಲಾದ ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ (Hafiz Saeed) ಪಾಕಿಸ್ತಾನವು ಸುಮಾರು ನಾಲ್ಕು ಬಾರಿ ಭದ್ರತೆಯನ್ನು ತೀವ್ರವಾಗಿ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.


ಇಸ್ಲಾಮಾಬಾದ್: ಪಹಲ್ಗಾಮ್‌ನಲ್ಲಿ (Pahalgam terror attack) ನಡೆದ ಉಗ್ರರ ದಾಳಿಯ ಮುಖ್ಯ ರೂವಾರಿ ಎಂದು ನಂಬಲಾದ ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ (Hafiz Saeed) ಪಾಕಿಸ್ತಾನವು ಸುಮಾರು ನಾಲ್ಕು ಬಾರಿ ಭದ್ರತೆಯನ್ನು ತೀವ್ರವಾಗಿ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿದ ಭದ್ರತಾ ವ್ಯಾಪ್ತಿಯಲ್ಲಿ ಪಾಕಿಸ್ತಾನ ಸಶಸ್ತ್ರ ಪಡೆಗಳು 24 ಗಂಟೆ ಲಾಹೋರ್‌ನಲ್ಲಿರುವ ಸಯೀದ್‌ನ ನಿವಾಸದ ಸುತ್ತಲೂ ಕಾವಲು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪಾಕಿಸ್ತಾನ ಸೇನೆ, ಐಎಸ್‌ಐ ಮತ್ತು ಲಷ್ಕರ್ ಕಾರ್ಯಕರ್ತರು ಜಂಟಿಯಾಗಿ ಆತನ ರಕ್ಷಣೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.
ಹಫೀಜ್ ಸಯೀದ್ ಮನೆಯ ಸುತ್ತಲೂ ಭದ್ರತೆ ಹೆಚ್ಚಸಲಾಗಿದೆ. ಮನೆಯ ಕಾಂಪೌಂಡ್ ಅನ್ನು ಮೇಲ್ವಿಚಾರಣೆ ಮಾಡಲು ಡ್ರೋನ್ ಕಣ್ಗಾವಲು ನಿಯೋಜಿಸಲಾಗಿದೆ ಮತ್ತು 4 ಕಿಲೋಮೀಟರ್ ವ್ಯಾಪ್ತಿಯೊಳಗಿನ ರಸ್ತೆಗಳಲ್ಲಿ ಹೆಚ್ಚಿನ ರೆಸಲ್ಯೂಶನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಟ್ಟಡದ ಬಳಿ ಯಾವುದೇ ನಾಗರಿಕರ ಸಂಚಾರಕ್ಕೆ ಅವಕಾಶವಿಲ್ಲ, ಮತ್ತು ಆ ಪ್ರದೇಶದಲ್ಲಿ ಡ್ರೋನ್‌ಗಳನ್ನು ನಿಷೇಧಿಸಲಾಗಿದೆ. ಲಷ್ಕರ್-ಎ-ತೊಯ್ಬಾದ ಒಂದು ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಪಹಲ್ಗಾಮ್ ದಾಳಿಯ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಟಿಆರ್‌ಎಫ್ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರೂ, ಭಾರತೀಯ ಸಂಸ್ಥೆಗಳು ಹಫೀಜ್ ಸಯೀದ್ ಈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಊಹಿಸಿವೆ. ಈ ಘಟನೆಯು ಭಾರತ ಮತ್ತು ಪಾಕಿಸ್ತಾನದ ನಡುವೆ ಹೊಸ ರಾಜತಾಂತ್ರಿಕ ಉದ್ವಿಗ್ನತೆಯನ್ನು ಹುಟ್ಟುಹಾಕಿದ್ದು, ಎರಡೂ ಕಡೆಯಿಂದ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಪಡೆದಿದೆ. ಹಫೀಜ್‌ನನ್ನು ಅಮೆರಿಕ ಹಾಗೂ ವಿಶ್ವಸಂಸ್ಥೆ ಸೇರಿದಂತೆ ಹಲವು ದೇಶಗಳು ಭಯೋತ್ಪಾದಕ ಎಂದು ಘೋಷಿಸಿವೆ. ಆದರೆ ಹಫೀಸ್ ಪಾಕಿಸ್ತಾನದಲ್ಲಿ ರಾಜರೋಷವಾಗಿ ಜೀವಿಸುತ್ತಿದ್ದಾನೆ. ಆತನ ನಿವಾಸ ಲಾಹೋರ್‌ನ ಹೃದಯಭಾಗದಲ್ಲಿದೆ. ಆತನನ್ನು ಕೊಂದರೆ ಅಮೆರಿಕ 10 ಸಾವಿರ ಡಾಲರ್ ಬಹುಮಾನ ಘೋಷಿಸಿದೆ. ಆದರೆ ಪಾಕ್ ಸರ್ಕಾರ ಉಗ್ರನನ್ನು ಪೋಷಿಸುತ್ತಿದೆ.
ಈ ಸುದ್ದಿಯನ್ನೂ ಓದಿ: Hafiz Saeed: 26/11 ಮುಂಬೈ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಅಡಗುತಾಣ ಪತ್ತೆ
ಹಫೀಜ್‌ನ ನಿವಾಸದ ಸುತ್ತಲಿನ ಕಾಂಪೌಂಡ್ ಅನ್ನು ಬಹಿರಂಗಪಡಿಸುವ ಉಪಗ್ರಹ ಚಿತ್ರಗಳು ಮತ್ತು ವೀಡಿಯೊಗಳು ಇತ್ತೀಚೆಗೆ ವೈರಲ್ ಆಗಿದ್ದವು. ಆತನ ನಿವಾಸ, ಮನೆ ಬಳಿ ಇರುವ ಮಸೀದಿ ಹಾಗೂ ಕಾರ್ಯಾಚರಣೆಯ ನೆಲೆಯಾಗಿ ಕಾರ್ಯನಿರ್ವಹಿಸುವ ಮದರಸಾ ಮತ್ತು ಹೊಸದಾಗಿ ನಿರ್ಮಿಸಲಾದ ಖಾಸಗಿ ಉದ್ಯಾನವನ ವಿಡಿಯೋದಲ್ಲಿ ತೋರಿಸಲಾಗಿತ್ತು. ಪಾಕಿಸ್ತಾನದ ಭದ್ರತಾ ಸಿಬ್ಬಂದಿಯ ಕಣ್ಗಾವಲಿನಲ್ಲಿ ಹಫೀಸ್ ಇದ್ದಾನೆ. ಆದರೆ ಪಾಕಿಸ್ತಾನ ಮಾತ್ರ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಆರೋಪದ ಮೇಲೆ ಅವನು ಜೈಲಿನಲ್ಲಿದ್ದಾನೆ ಎಂದು ಹೇಳಿಕೆ ನೀಡಿದೆ. 2021 ರಲ್ಲಿ ಸಯೀದ್ ಮನೆಯ ಬಳಿ ಕಾರ್ ಬಾಂಬ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ ನಂತರ ಆತನ ಸುತ್ತಲಿನ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ನಂತರ ಇತ್ತೀಚೆಗೆ ಆತನ ಆಪ್ತ ಸಹಾಯಕ ಅಬು ಕತಾಲ್ ಹತ್ಯೆಯ ನಂತರ ಆತನ ರಕ್ಷಣೆಯನ್ನು ಮತ್ತೆ ಬಿಗಿಗೊಳಿಸಲಾಯಿತು ಮತ್ತು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳು ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿವೆ ಎಂದು ವರದಿಯಾಗಿದೆ.