ಯುದ್ಧ ನಡೆದರೆ ಅಮೆರಿಕ ಪಾಕ್‌ನ ಪರಮಾಣು ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುತ್ತಾ? ಏನಿದು Snatch And Grab ಪ್ಲ್ಯಾನ್?
Snatch And Grab: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಜತೆಗೆ ಇದು ಪರಮಾಣು ಬಳಕೆಯ ಭೀತಿಯನ್ನು ಹೆಚ್ಚಿಸಿದೆ. ಪಾಕಿಸ್ತಾನವು ಪದೇ ಪದೆ ಪರಮಾಣು ದಾಳಿಯ ಬೆದರಿಕೆ ಒಡ್ಡುತ್ತಿರುವುದು ಜಾಗತಿಕವಾಗಿ ಕಳವಳವನ್ನುಂಟು ಮಾಡಿದೆ. ಇದರೆ ತಡೆಗೆ ಅಮೆರಿಕ Snatch And Grab ಪ್ಲ್ಯಾನ್ ಬಳಸಿಕೊಳ್ಳುತ್ತಾ?

ಸಾಂದರ್ಭಿಕ ಚಿತ್ರ.

ವಾಷಿಂಗ್ಟನ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Attack) ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಜತೆಗೆ ಇದು ಪರಮಾಣು ಬಳಕೆಯ ಭೀತಿಯನ್ನು ಹೆಚ್ಚಿಸಿದೆ. ಪಾಕಿಸ್ತಾನವು ಪದೇ ಪದೆ ಪರಮಾಣು ದಾಳಿಯ ಬೆದರಿಕೆ ಒಡ್ಡುತ್ತಿರುವುದು ಜಾಗತಿಕವಾಗಿ ಕಳವಳವನ್ನುಂಟು ಮಾಡಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಇತ್ತೀಚೆಗೆ "ನಮ್ಮ ಅಸ್ತಿತ್ವಕ್ಕೆ ನೇರ ಬೆದರಿಕೆ ಇದ್ದರೆ ಪಾಕಿಸ್ತಾನವು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಿದೆʼʼ ಎಂದು ಹೇಳಿಕೆ ನೀಡಿದ್ದರು. ಮತ್ತೊಬ್ಬ ಸಚಿವ ಹನೀಫ್ ಅಬ್ಬಾಸಿ ಭಾರತದ ವಿರುದ್ಧ ಪರಮಾಣು ಪ್ರತೀಕಾರ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ಶಾಹೀನ್ ಮತ್ತು ಘಜ್ನವಿ ಸೇರಿದಂತೆ 130 ಕ್ಷಿಪಣಿಗಳನ್ನು ಭಾರತದ ಮೇಲಿನ ದಾಳಿಗಾಗಿ ಸಜ್ಜುಗೊಳಿಸಲಾಗಿದೆ ಎಂದು ಹೇಳಿದ್ದರು. ಈ ಎಲ್ಲ ಕಾರಣಗಳಿಂದ ಪಾಕ್‌ನ ನಡೆ ಜಾಗತಿಕವಾಗಿ ಚರ್ಚೆಯನ್ನು ಹುಟ್ಟು ಹಾಕಿದೆ.
ಅಮೆರಿಕದ ಕಳವಳವೇನು?
ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ಬಗ್ಗೆ ಅಮೆರಿಕ ದಶಕಗಳ ಹಿಂದೆಯೇ ಕಳವಳ ವ್ಯಕ್ತಪಡಿಸುತ್ತಲೇ ಬಂದಿದೆ. ತನ್ನ ಹಾಗೂ ಮಿತ್ರ ರಾಷ್ಟ್ರಕ್ಕೆ ಬೆದರಿಕೆ ಎಂದೆನಿಸಿದರೆ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಕಸಿದುಕೊಳ್ಳಲು ಅಮೆರಿಕ ಯೋಜನೆ ರೂಪಿಸಿದೆ ಎಂದು 2011ರಲ್ಲಿ ಎನ್‌ಬಿಸಿ ನ್ಯೂಸ್ ವರದಿ ಮಾಡಿತ್ತು.
ಪಹಲ್ಗಾಮ್ ದಾಳಿಯ ನಂತರ ಉಭಯ ದೇಶಗಳ ನಡುವಿನ ಕಾಣಿಸಿಕೊಂಡ ಉದ್ವಿಗ್ನತೆಯ ಬಳಿಕ ಸಹಾಯ ಮಾಡುವಂತೆ ಅಮೆರಿಕದಲ್ಲಿನ ಪಾಕ್ ರಾಯಭಾರಿ ರಿಜ್ವಾನ್ ಶೇಖ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಗ್ರಹಿಸಿದ್ದಾರೆ. ಇತ್ತ ಪರಮಾಣು ಬಿಕ್ಕಟ್ಟು ಉದ್ಭವಿಸಿದರೆ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳುವ ಅಧಿಕಾರವನ್ನು ಅಮೆರಿಕ ಹೊಂದಿದೆಯೇ ಎನ್ನುವುದು ಸದ್ಯದ ಕುತೂಹಲ.
ಈ ಸುದ್ದಿಯನ್ನೂ ಓದಿ: Imran Khan: ಪಹಲ್ಗಾಮ್ ದಾಳಿ ಬಗ್ಗೆ ನಾಲಗೆ ಹರಿಬಿಟ್ಟ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್
ನಿಯಮ ಏನು ಹೇಳುತ್ತದೆ?
ಅಮೆರಿಕ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳು ಈ ಹಿಂದೆಯೇ ಇಂತಹ ಯೋಜನೆಯನ್ನು ಚರ್ಚಿಸಿವೆ ಎನ್ನಲಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲು ಅಮೆರಿಕ ಆಕಸ್ಮಿಕ ಯೋಜನೆಗಳನ್ನು ರೂಪಿಸಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ಚರ್ಚೆಗಳು ಅಮೆರಿಕದ ಹಿಂದಿನ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಡಬ್ಲ್ಯು ಬುಷ್ ಅವರ ಆಡಳಿತದ ಸಮಯದಲ್ಲಿ ನಡೆದಿದ್ದವು. ಇದು ಇಂದಿಗೂ ಅಮೆರಿಕದ ಆದ್ಯತೆಯಾಗಿ ಮುಂದುವರಿದಿದೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನದಲ್ಲಿ ಆಂತರಿಕ ಅವ್ಯವಸ್ಥೆ, ಪರಮಾಣು ನಿಲಯಗಳ ಮೇಲೆ ಮೇಲೆ ಭಯೋತ್ಪಾದಕ ದಾಳಿ, ಮಿಲಿಟರಿ ಅಥವಾ ಸರ್ಕಾರವನ್ನು ಉಗ್ರಗಾಮಿಗಳು ಸ್ವಾಧೀನಪಡಿಸಿಕೊಳ್ಳುವುದು ಅಥವಾ ಭಾರತದೊಂದಿಗೆ ಯುದ್ಧದ ಸಂದರ್ಭ ಇತ್ಯಾದಿ ಸನ್ನಿವೇಶಗಳೂ ಇದರಲ್ಲಿ ಸೇರಿದೆ ಎನ್ನಲಾಗಿದೆ. ಇದನ್ನು Snatch and Grab ಯೋಜನೆ ಎಂದು ಕರೆಯಲಾಗುತ್ತದೆ.
ಕಳೆದ ಡಿಸೆಂಬರ್‌ನಲ್ಲಿ ಆರ್ಮ್ಸ್ ಕಂಟ್ರೋಲ್ ಅಸೋಸಿಯೇಷನ್ (Arms Control Association) ಆಯೋಜಿಸಿದ್ದ ಭದ್ರತಾ ಸಭೆಯಲ್ಲಿ ಅಮೆರಿಕದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಫೈನರ್, ಪಾಕಿಸ್ತಾನವು ಸುಧಾರಿತ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿದೆ. ಅದು ಅಮೆರಿಕ ಸೇರಿದಂತೆ ದಕ್ಷಿಣ ಏಷ್ಯಾದ ಆಚೆಗಿನ ಗುರಿಗಳನ್ನು ತಲುಪಲು ಅನುವು ಮಾಡಿಕೊಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಪಾಕಿಸ್ತಾನವು ಈಗಾಗಲೇ ಶಾಹೀನ್ -3 ಕ್ಷಿಪಣಿಯನ್ನು ಹೊಂದಿದ್ದು, ಇದನ್ನು ಮೊದಲು 2015ರಲ್ಲಿ ಪರೀಕ್ಷಿಸಲಾಗಿತ್ತು. 2,750 ಕಿ.ಮೀ. ದೂರದಲ್ಲಿರುವ ಗುರಿಗಳನ್ನು ಹೊಡೆಯಬಲ್ಲ ಸಾಮರ್ಥ್ಯವನ್ನು ಇದು ಹೊಂದಿದೆ. ಇದರರ್ಥ ಇದು ಭಾರತದ ಯಾವುದೇ ಸ್ಥಳವನ್ನು ತಲುಪಬಹುದು ಎಂದು ತಜ್ಞರು ಹೇಳಿದ್ದಾರೆ. ಪಾಕಿಸ್ತಾನವು ಸಣ್ಣ ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿಗಳಲ್ಲಿ ಸುಮಾರು 170 ಪರಮಾಣು ಸಿಡಿತಲೆಗಳನ್ನು ನಿಯೋಜಿಸಿದೆ ಎನ್ನಲಾಗಿದ್ದು, ಇವು ವಿನಾಶಕಾರಿ ಹಾನಿಯನ್ನು ಉಂಟು ಮಾಡಬಹುದು ಎಂದು ಅಂದಾಜಿಸಲಾಗಿದೆ.