ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ಪೌರ ಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತಂದಿದೆ: ಡಿ.ಕೆ.ಶಿವಕುಮಾರ್

ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು 12,692 ಮಂದಿ ಪೌರ ಕಾರ್ಮಿಕರಿಗೆ ಸೇವೆ ಖಾಯಂ ನೇಮಕಾತಿ ಪತ್ರ ವಿತರಣೆ ಮಾಡಿದರು.

ನಮ್ಮ ಸರ್ಕಾರ ಪೌರ ಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತಂದಿದೆ: ಡಿಕೆಶಿ

Profile Siddalinga Swamy May 1, 2025 7:22 PM

ಬೆಂಗಳೂರು: ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಪೌರ ಕಾರ್ಮಿಕರನ್ನು ಖಾಯಂ ಮಾಡುವ ಮೂಲಕ ಅವರ ಬದುಕಿನಲ್ಲಿ ಬದಲಾವಣೆ ತಂದು, ಸಮಾಜದಲ್ಲಿ ಸಮಾನತೆ ತರುವ ಕೆಲಸ ಮಾಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar)‌ ತಿಳಿಸಿದರು. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಗುರುವಾರ ನಡೆದ ಪೌರ- ಕಾರ್ಮಿಕರ ದಿನಾಚರಣೆ ಹಾಗೂ 12,692 ಮಂದಿ ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜ ಸುಭದ್ರವಾಗಿರಲು ನಾಲ್ಕು ಆಧಾರ ಸ್ತಂಭಗಳಿರಬೇಕು. ಅವುಗಳೆಂದರೆ ಕೃಷಿಕ, ಕಾರ್ಮಿಕ, ಸೈನಿಕ ಹಾಗೂ ಶಿಕ್ಷಕ. ಕಾರ್ಮಿಕರು ಈ ಸಮಾಜದ ಆಧಾರಸ್ತಂಭ. ನಮ್ಮ ಸರ್ಕಾರ ಪೌರಕಾರ್ಮಿಕರನ್ನು ದೇವರ ಮಕ್ಕಳು, ಸ್ವಚ್ಛತಾ ರಾಯಭಾರಿಗಳು ಎಂದು ಭಾವಿಸುತ್ತಿದೆ. ನೀವು ಸಮಾಜದ ಆರೋಗ್ಯ ಕಾಪಾಡುತ್ತಿರುವ ವೈದ್ಯರು, ನೀವು ಬೆಂಗಳೂರು ನಗರವನ್ನು ಸುಂದರವಾಗಿಟ್ಟು ಸೇವೆ ಮಾಡಿರುವುದಕ್ಕೆ ಈ ನಗರಕ್ಕೆ ವಿಶ್ವ ಮಟ್ಟದ ಹೆಸರು ಬಂದಿದೆ. ಇಡೀ ವಿಶ್ವಕ್ಕೆ ದೊಡ್ಡ ಸೇವೆ ಮಾಡುವ ಕಾರ್ಮಿಕರ ದಿನವಿಂದು ಎಂದು ಶ್ಲಾಘಿಸಿದರು.

ಪುರದ ಹಿತ ಕಾಪಾಡುತ್ತಿರುವವರು ಪೌರ ಕಾರ್ಮಿಕರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಾವು ವಿರೋಧ ಪಕ್ಷದಲ್ಲಿದ್ದಾಗ ಹಾಗೂ ನನ್ನ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷ ಪೌರ ಕಾರ್ಮಿಕರನ್ನು ಸರ್ಕಾರಿ ಕಾರ್ಮಿಕರನ್ನಾಗಿ ಮಾಡುವ ಮಾತು ಕೊಟ್ಟಿದ್ದೆವು. ನಾವುಗಳು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಪೌರ ಕಾರ್ಮಿಕರ ಮಕ್ಕಳೇ ಇಂದು ಈ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ, ಬುದ್ಧಿವಂತರಾಗಿ ದೊಡ್ಡ ಹುದ್ದೆ ಅಲಂಕರಿಸುವಂತೆ ಮಾಡಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದು ಹೇಳಿದರು.

ಪೌರ ಕಾರ್ಮಿಕರ ಅಭಿವೃದ್ಧಿಗಾಗಿ ಪಾಲಿಕೆ ಬಜೆಟ್‌ನಲ್ಲಿ ರೂ. 600 ಕೋಟಿ ಹಣ ಮೀಸಲಿಡಲಾಗಿದ್ದು, ಒಂದೇ ಒಂದು ರೂಪಾಯಿ ಲಂಚ ಪಡೆಯದೇ ನಿಮ್ಮನ್ನು ಖಾಯಂ ಮಾಡಲಾಗಿದೆ. ಸಿಂಧುತ್ವ ವಿಚಾರದಲ್ಲಿ ಕೆಲವು ಗೊಂದಲಗಳಿರುವ ಕಾರಣಕ್ಕೆ ಕೆಲವರ ಕೆಲಸ ಖಾಯಂ ಆಗಿಲ್ಲ. ಈ ಬಗ್ಗೆ ಪ್ರತ್ಯೇಕವಾಗಿ ಬೂತ್ ಆರಂಭಿಸಿ, ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿಸಿ ನಿಮ್ಮೆಲ್ಲರಿಗೂ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು.

ಬಸವಲಿಂಗಪ್ಪ, ಐಪಿಡಿ ಸಾಲಪ್ಪ ಅವರ ಜತೆ ನಾನು ರಾಜಕೀಯವಾಗಿ ಕೆಲಸ ಮಾಡಿದ್ದು, ಅವರನ್ನು ಸ್ಮರಿಸುತ್ತೇನೆ. ಅವರು ನಿಮ್ಮ ಬದುಕಿನ ಕಲ್ಯಾಣಕ್ಕೆ ಹೋರಾಟ ಮಾಡಿದ್ದಾರೆ. ಡಿ.ಸಾಲಪ್ಪ ಅವರು ನಿಮ್ಮ ಬಗ್ಗೆ ವರದಿ ನೀಡಿದ್ದಾರೆ. ಆ ವರದಿಯನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ನಿಮ್ಮ ಮಕ್ಕಳ ಭವಿಷ್ಯ ಗಟ್ಟಿಗೊಳಿಸಲು ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ 700 ಕೋಟಿ ಮೀಸಲಿಡಲಾಗಿದೆ. ನೀವು ನಿವೃತ್ತಿಯಾದಾಗ 10 ಲಕ್ಷ ಹಣವನ್ನು ಡೆಪಾಸಿಟ್ ಮಾಡಿ 6 ಸಾವಿರ ಪಿಂಚಣಿ ದೊರೆಯುವಂತೆ ಯೋಜನೆ ರೂಪಿಸಿದ್ದೇವೆ. ನಿಮಗೆ ಆರೋಗ್ಯ, ಮಕ್ಕಳ ಶಿಕ್ಷಣ, ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. 2017ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 10 ಸಾವಿರ ಪೌರ ಕಾರ್ಮಿಕರನ್ನು ನೇರ ನೇಮಕ ಮಾಡಿತ್ತು. ರಾಜ್ಯದಾದ್ಯಂತ ನಿಮಗಾಗಿ 7.70 ಲಕ್ಷ ಮನೆ ನಿರ್ಮಿಸಲಾಗಿತ್ತು. 1 ಸಾವಿರ ಪೌರ ಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲಾಗಿದೆ. 2024-25ನೇ ಸಾಲಿನ ಬಜೆಟ್ ನಲ್ಲಿ ಆರೋಗ್ಯ ವಿಮೆ ಘೋಷಿಸಿದ್ದಾರೆ ಎಂದು ಸರ್ಕಾರದ ಕಾರ್ಯಕ್ರಮಗಳನ್ನು ವಿವರಿಸಿದರು.

ಈ ಸುದ್ದಿಯನ್ನೂ ಓದಿ | Union Bank Recruitment 2025: ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿದೆ 500 ಹುದ್ದೆ; ಹೀಗೆ ಅಪ್ಲೈ ಮಾಡಿ

ಕೋವಿಡ್ ಸಂದರ್ಭದಲ್ಲಿ ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ವಾರಿಯರ್‌ನಂತೆ ಇಡೀ ರಾಜ್ಯವನ್ನು ಕಾಪಾಡಿದ್ದನ್ನು ನಾವು ಮರೆಯಲು ಸಾಧ್ಯವಿಲ್ಲ. ಪೌರ ಕಾರ್ಮಿಕರನ್ನು ಯಾರೂ ಕೀಳಾಗಿ ಕಾಣುವಂತಿಲ್ಲ. ನಾವು ಆಯುಕ್ತರಿಗೆ ನೀಡುವ ಗೌರವವನ್ನು ಪೌರಕಾರ್ಮಿಕರಿಗೂ ನೀಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.