ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KV Prabhakar: ಆರೋಗ್ಯಕರ ಸಮಾಜ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಕೆ.ವಿ.ಪ್ರಭಾಕರ್

KV Prabhakar: ಶಿಕ್ಷಕರು ಅಂದರೆ ಮಕ್ಕಳಲ್ಲಿ ಮತ್ತು ಮಕ್ಕಳ ಮೂಲಕ ಸಮಾಜದಲ್ಲಿ ಸಹೃದಯತೆ-ಸಮನ್ವಯತೆ-ಸಹಿಷ್ಣುತೆ-ಸದಾಚಾರ-ಸದ್ವಿಚಾರ-ಸಹಬಾಳ್ವೆ-ಸದಭಿರುಚಿ ಯನ್ನು ರೂಪಿಸುವ ಸಾಮಾಜಿಕ ರಾಯಭಾರಿಗಳು ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಶಿಕ್ಷಕರನ್ನು ವಂದಿಸುವುದು ಉತ್ತಮ‌ ಸಂಸ್ಕಾರ: ಕೆ.ವಿ.ಪ್ರಭಾಕರ್

Profile Siddalinga Swamy May 1, 2025 3:15 PM

ಬೆಂಗಳೂರು: ಶಿಕ್ಷಕರು ಅಂದರೆ ಮಕ್ಕಳಲ್ಲಿ ಮತ್ತು ಮಕ್ಕಳ ಮೂಲಕ ಸಮಾಜದಲ್ಲಿ ಸಹೃದಯತೆ-ಸಮನ್ವಯತೆ-ಸಹಿಷ್ಣುತೆ-ಸದಾಚಾರ-ಸದ್ವಿಚಾರ-ಸಹಬಾಳ್ವೆ-ಸದಭಿರುಚಿ ಯನ್ನು ರೂಪಿಸುವ ಸಾಮಾಜಿಕ ರಾಯಭಾರಿಗಳು. ಇವರನ್ನು ವಂದಿಸುವುದು ಉತ್ತಮ‌ ಸಂಸ್ಕಾರ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ. ಪ್ರಭಾಕರ್ (KV Prabhakar)‌ ತಿಳಿಸಿದರು. ಮೀಡಿಯಾ ಕನೆಕ್ಟ್ ಮತ್ತು ಪುಣ್ಯ ಫೌಂಡೇಷನ್ ವಿದ್ಯಾಭವನದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಮಕೂರಿನ ಇಡಗೂರು ಸರ್ಕಾರಿ ಶಾಲೆಯ ಶಿಕ್ಷಕರು ಸಮಾಜಮುಖಿಯಾದ ಪ್ರಜೆಗಳನ್ನು ಸೃಷ್ಟಿಸಿ ಸಮಾಜಕ್ಕೆ ಒಪ್ಪಿಸಿದ್ದಾರೆ ಎನ್ನುವುದಕ್ಕೆ ಈ ಗುರುವಂದನಾ ಕಾರ್ಯಕ್ರಮವೇ ಸಾಕ್ಷಿ. 25 ವರ್ಷಗಳ ಹಿಂದೆ ನಿಮ್ಮಿಂದ ತಿದ್ದಿ ಬೆಳೆದ ವಿದ್ಯಾರ್ಥಿಗಳು, ತಮ್ಮ ಶಿಕ್ಷಕರನ್ನು ವಂದಿಸುವ ಮೂಲಕ ತಮ್ಮ ಸಂಸ್ಕಾರವನ್ನು ತೋರಿಸುತ್ತಿದ್ದಾರೆ ಎಂದರು.

ರೈತರು-ಶಿಕ್ಷಕರು-ಸೈನಿಕರು ಆರೋಗ್ಯಕರ ಮತ್ತು ನೆಮ್ಮದಿಯ ಸಮಾಜದ ಸೇನಾನಿಗಳು ಎಂದು ನಮ್ಮ ಮುಖ್ಯಮಂತ್ರಿಗಳು ಯಾವಾಗಲೂ ಹೇಳ್ತಾ ಇರ್ತಾರೆ. ಇದು ಅಕ್ಷರಶಃ ನಿಜ. ಇದಕ್ಕೆ ಸರ್ವಾಧಿಕಾರಿ ಹಿಟ್ಲರ್‌ನ ಒಂದು ಪ್ರಸಂಗ ನೆನಪಿಸುತ್ತೇನೆ. ಯುದ್ಧದಾಹಿಯಾಗಿದ್ದ ಹಿಟ್ಲರ್ ಯಾವುದೇ ಪ್ರದೇಶವನ್ನು, ದೇಶವನ್ನು ವಶಪಡಿಸಿಕೊಂಡಾಗ ಮೊದಲಿಗೆ ಆ ಪ್ರದೇಶದಲ್ಲಿರುವ ಶಿಕ್ಷಕರನ್ನು ಬಂಧಿಸಲು ತನ್ನ ಸೈನಕ್ಕೆ ಸೂಚಿಸುತ್ತಿದ್ದ. ಏಕೆಂದರೆ, ಶಿಕ್ಷಕರು ಮಕ್ಕಳು ಮತ್ತು ಸಮಾಜವನ್ನು ಬೇಗ ಪ್ರಭಾವಿಸುತ್ತಾರೆ, ತಮ್ಮ ಪ್ರಭಾವದಿಂದ ಹೋರಾಟಗಳನ್ನು ರೂಪಿಸುತ್ತಾರೆ ಎನ್ನುವ ತಿಳಿವಳಿಕೆ ಮತ್ತು ಭಯ ಎರಡೂ ಹಿಟ್ಲರ್‌ಗೆ ಇತ್ತು ಎಂದರು.

ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೂ ಮಹಾತ್ಮಗಾಂಧಿಯವರ ವಿಚಾರಗಳಿಗೆ ಮೊದಲು ಪ್ರಭಾವಿತರಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿದವರು ಶಾಲಾ ಶಿಕ್ಷಕರೇ. ಇದಕ್ಕೆ ಮತ್ತೊಂದು ಉದಾಹರಣೆ ಹೇಳ್ತೇನೆ. ಸಮಾಜವಾದಿ ಹೋರಾಟಗಾರರಾದ ಶಾಂತವೇರಿ ಗೋಪಾಲಗೌಡರು ತಮ್ಮ ಚಿಂತನೆಗಳನ್ನು, ಹೋರಾಟದ ವಿಷಯಗಳನ್ನು ಜನರಿಗೆ ಹೇಳುವ ಮೊದಲು ಶಾಲೆಗಳಿಗೆ ಹೋಗಿ ಶಿಕ್ಷಕರು ಮತ್ತು ಮಕ್ಕಳಿಗೆ ಹೇಳುತ್ತಿದ್ದರು. ಶಿಕ್ಷಕರು ಮತ್ತು ಮಕ್ಕಳು ಒಟ್ಟಾಗಿ ಪೋಷಕರಿಗೆ ವಿಷಯ ಮುಟ್ಟಿಸುತ್ತಿದ್ದರು. ಹೀಗಾಗಿ ಆರೋಗ್ಯಕರ ಸಮಾಜವನ್ನು ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದರು.

ಈಗ ತಂತ್ರಜ್ಞಾನದ ಕಾರಣಕ್ಕೆ ಸಮಾಜ ಅತ್ಯಂತ ವೇಗವಾಗಿ ಬೆಳೆಯುತ್ತಿದೆ, ಬದಲಾಗುತ್ತಾ ಶಿಕ್ಷಣದ ಅಗತ್ಯ ಮತ್ತು ಮಹತ್ವ ಕೂಡ ಬದಲಾಗುತ್ತಿದೆ. ಕಾರ್ಪೋರೇಟ್ ಜಗತ್ತಿನ ಮಾರುಕಟ್ಟೆಗೆ ಬೇಕಾದ ʼಮಾಲುʼ ಗಳನ್ನು ಮಾತ್ರ ಸೃಷ್ಟಿಸುವ ಒತ್ತಡವನ್ನು ಹೇರಲಾಗುತ್ತಿದೆ. ಈ ಸವಾಲನ್ನು ನಾವೆಲ್ಲರೂ ಅತ್ಯಂತ ಸಮನ್ವಯದಿಂದ ಎದುರಿಸಬೇಕಿದೆ. ರಾಜಕೀಯ ಮಾರುಕಟ್ಟೆ, ಕಾರ್ಪೋರೇಟ್ ಮಾರುಕಟ್ಟೆಯ ಒತ್ತಡಗಳಿಗೆ ಮಣಿಯಬಾರದು ಎಂದರು.

ಈಗ ನಮ್ಮ ಸರ್ಕಾರ ಒಂದು ಹೊಸ ಕಾರ್ಯಕ್ರಮ‌ ರೂಪಿಸಿದೆ. ʼನನ್ನ‌ ಶಾಲೆ ನನ್ನ ಜವಾಬ್ದಾರಿʼ ಎನ್ನುವ ಕಾರ್ಯಕ್ರಮ. ಸರ್ಕಾರಿ ಶಾಲೆಗಳಲ್ಲಿ‌ ಓದಿದ ಲಕ್ಷಾಂತರ ಮಂದಿ ತಾವು ಓದಿದ ಶಾಲೆಗಳಿಗೆ ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ಹಲವರು ತಾವು ಓದಿದ ಶಾಲೆಗಳನ್ನು ದತ್ತು ಕೂಡ ಪಡೆದಿದ್ದಾರೆ. ಕೆಲವರು ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಇಂಥಾ ಕಾಳಜಿಗಳು ಹೆಚ್ಚೆಚ್ವು ವ್ಯಕ್ತ ಆಗುವುದು ಸರ್ಕಾರಿ ಶಾಲೆಗಳಲ್ಲಿ‌ ಓದಿದವರಿಂದಲೇ. ನಾನು ಕೂಡ ಕೋಲಾರದಲ್ಲಿ ಓದಿದ್ದು‌ ಸರ್ಕಾರಿ ಶಾಲೆಯಲ್ಲೇ. ಈಗ ಆ ಶಾಲೆಗೆ ಅಪಾರ ನೆರವು ಒದಗಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ತಾವು ಓದಿದ ಶಾಲೆಗೆ ನೆರವು ನೀಡಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Akshaya Tritiya: ಚಿನ್ನದ ಮಳಿಗೆಗಳಿಗೆ ಹಬ್ಬ! ಅಕ್ಷಯ ತೃತೀಯ ದಿನ 3000 ಕೋಟಿ ರೂ. ವಹಿವಾಟು

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸತಿ ಸಚಿವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.